ಹೊನ್ನಾವರ : ತಾಲ್ಲೂಕಿನ ಗೇರುಸೊಪ್ಪ–ಸುಳೆಮುರ್ಕಿ ಕ್ರಾಸ್ ಸಮೀಪ ತಡರಾತ್ರಿ ಇಲ್ಲವೇ ಬುಧವಾರ ನಸುಕಿನ ವೇಳೆಯಲ್ಲಿ ಕಾರೊಂದು ಬೆಂಕಿಗೆ ಆಹುತಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಸಜೀವ ದಹನಗೊಂಡಿದ್ದಾರೆ. ಈ ಬಗ್ಗೆ ಇಂದು ಬುಧವಾರ ಬೆಳಿಗ್ಗೆ 7:00 ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಕಾರು ಹಾಗೂ ಅದರೊಳಗಿನ ಇಬ್ಬರ ದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಗುರುತು ಪತ್ತೆ ಸಾಧ್ಯವಾಗದ ಸ್ಥಿತಿಯಲ್ಲಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರು ಮರಕ್ಕೆ ಡಿಕ್ಕಿ ಹೊಡೆದು ಪಕ್ಕದ ಕಂದಕಕ್ಕೆ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಡಿಕ್ಕಿಯ ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.