
ಅಳಿಯನಿಗೆ ಸಹಾಯಕ ಪ್ರಾಧ್ಯಾಪಕ ಕೆಲಸ ಕೊಡಿಸಲು ₹13 ಲಕ್ಷ ಹಣ ನೀಡಿದ ಮಾವನಿಗೆ ಹೈಕೋರ್ಟ್ ತರಾಟೆ
ಬೆಂಗಳೂರು || ಅಳಿಯನಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆ ಕೊಡಿಸುವುದಾಗಿ ನಂಬಿಸಿ ₹13 ಲಕ್ಷ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ದಾವಣಗೆರೆಯ ನಿವಾಸಿ ವಿ.ಎಂ. ರಮೇಶ್ ಬಾಬು ಎಂಬಾತ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀಷಾನಂದ ಅವರ ಪೀಠ ವಜಾಗೊಳಿಸಿದೆ.
ಆರೋಪಿ ಅಮಾಯಕ ಎಂಬುದನ್ನು ತೀರ್ಮಾನಿಸುವ ಹಂತಕ್ಕೆ ಪ್ರಕರಣದ ವಿಚಾರಣೆ ಇನ್ನೂ ತಲುಪಿಲ್ಲ. ಹೀಗಾಗಿ, ಈ ಹಂತದಲ್ಲಿ ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಇದೇ ವೇಳೆ ಅಳಿಯನಿಗೆ ಕೆಲಸ ಕೊಡಿಸಲು ₹13 ಲಕ್ಷ ಹಣ ನೀಡಿದ ದೂರುದಾರ ಪಂಚಾಕ್ಷರಿ ಅವರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.
“ಅಳಿಯನಿಗೆ ಕೆಲಸ ಸಿಕ್ಕರೆ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ಕಾರಣಕ್ಕೆ ಹಣ ನೀಡಿರುವುದು ಸರಿಯಲ್ಲ. ಅಳಿಯ ತನ್ನ ಪತ್ನಿಯನ್ನು ದುಡಿದು ಸಂಪಾದಿಸಿದ ಹಣದಿಂದ ನೋಡಿಕೊಳ್ಳಬೇಕು. ₹13 ಲಕ್ಷ ನೀಡುವ ಬದಲು, ದುಡಿದು ಹೆಂಡತಿಯನ್ನು ಸಾಕುವಂತೆ ಅಳಿಯನಿಗೆ ಹೇಳಬೇಕಿತ್ತು” ಎಂದು ನ್ಯಾಯಪೀಠ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು.
ಅಲ್ಲದೆ, ಕೆಲಸ ಕೊಡಿಸುವುದಾಗಿ ನಂಬಿಸಿ ₹13 ಲಕ್ಷ ಹಣ ಪಡೆದು ವಂಚಿಸಿರುವ ಆರೋಪಿಯ ವಿರುದ್ಧವೂ ನ್ಯಾಯಪೀಠ ಕಿಡಿಕಾರಿತು.
“₹13 ಲಕ್ಷದಷ್ಟು ಹಣವನ್ನು ದುಡಿದು ಉಳಿಸಲು ದೂರುದಾರರು ಎಷ್ಟು ಕಷ್ಟಪಟ್ಟಿರಬಹುದು” ಎಂದು ನ್ಯಾಯಪೀಠ ಪ್ರಶ್ನಿಸಿತು.
ಈ ಪ್ರಕರಣದಲ್ಲಿ ಹಣ ನೀಡಿದ ವ್ಯಕ್ತಿಯ ಮನೆಗೆ ಆರು ಜನರನ್ನು ಕಳುಹಿಸಿ ಜೀವ ಬೆದರಿಕೆ ಹಾಕಿದ ಆರೋಪವೂ ಕೇಳಿಬಂದಿದೆ.
Yadgir, Yadgir | Sep 13, 2026