ಗೋಶಾಲೆಯಿಂದಲೇ ಅಕ್ರಮ ಗೋಸಾಗಾಟ: ವಾಹನ ಮತ್ತು ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ
ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಕಲ್ಗುಂಡಿ ಬಳಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಪಿಕ್ ಅಪ್ ವಾಹನವನ್ನು ತಡೆದ ಸ್ಥಳೀಯರು, ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.
ವಾಹನದಲ್ಲಿದ್ದ 8 ರಿಂದ 10 ಗೋವುಗಳನ್ನು ರಕ್ಷಿಸಲಾಗಿದ್ದು, ಬಂಧಿತ ಆರೋಪಿಯನ್ನು ಕುಂದಾಪುರ ಮೂಲದ ಇಲಿಯಾಸ್ ಎಂದು ಗುರುತಿಸಲಾಗಿದೆ. ವಾಹನದಲ್ಲಿದ್ದ ಮತ್ತಿಬ್ಬರು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ರಕ್ಷಿಸಲಾದ ಗೋವುಗಳನ್ನು ವಧೆ ಮಾಡುವ ಉದ್ದೇಶದಿಂದಲೇ ಸಾಗಿಸಲಾಗುತ್ತಿತ್ತು ಎಂದು ವಶಕ್ಕೆ ಪಡೆದ ಆರೋಪಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಆರೋಪಿ ಇಲಿಯಾಸ್ ನೀಡಿರುವ ಮಾಹಿತಿಯಂತೆ, ಈ ಕೃತ್ಯದಲ್ಲಿ ಕುಂದಾಪುರದ ಹರ್ಷ, ನಯೀಂ, ಮುತ್ತ ಹಾಗೂ ತೀರ್ಥಹಳ್ಳಿಯ ಗಿರೀಶ್ ಎಂಬುವರು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ರಸ್ತೆಯಲ್ಲಿ ಓಡಾಡುವ ಹಾಗೂ ಮಲಗುವ ದನಗಳಷ್ಟೇ ಅಲ್ಲದೆ, ಸ್ಥಳೀಯ ಗೋಶಾಲೆಗಳಿಂದಲೇ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿ ದೂರು ನೀಡಿದ್ದಾರೆ. ಈ ಆರೋಪದಿಂದಾಗಿ ಪ್ರಕರಣ ಈಗ ಮತ್ತಷ್ಟು ಕುತೂಹಲ ಹಾಗೂ ಗಂಭೀರ ಸ್ವರೂಪ ಪಡೆದುಕೊಂಡಿದೆ.
ವಶಪಡಿಸಿಕೊಂಡ ವಾಹನ ಮತ್ತು ಗೋವುಗಳನ್ನು ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಪೊಲೀಸ್ ಠಾಣೆಯ ಎದುರು ಇರಿಸಲಾಗಿದ್ದು, ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Yadgir, Yadgir | Sep 12, 2026