ಬಜಾರ್ ವ್ಯಾಪ್ತಿಯಲ್ಲಿ ಕೋಟ್ಯಂತರ ಮೌಲ್ಯದ ಸರ್ಕಾರಿ ಜಮೀನು ಅತಿಕ್ರಮಣ ತೆರವು- ಜಮೀನು ವಶಕ್ಕೆ ಪಡೆದ ಜಿಲ್ಲಾಡಳಿತ
ಬಳ್ಳಾರಿ,ಸೆ.12 :
ನಗರದ ಕೌಲ್ ಬಜಾರ್ ಸಮೀಪದ ‘ನಲ್ಲಚೆರುವು' ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಂದಾಯ ಹಾಗೂ ನಗರ ಪಾಲಿಕೆ ಅಧಿಕಾರಿಗಳು ಶುಕ್ರವಾರ ಪೊಲೀಸ್ ಬಂದೋಬಸ್ತ್ನಲ್ಲಿ ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.
ಕೌಲ್ ಬಜಾರ್ ವಾರ್ಡ್ ನಂ. 16, ಟಿ.ಎಸ್. ನಂ. 21/1ಎ1 ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಂಡು, ಕೆರೆಯ ಕೊಳಚೆ ನೀರನ್ನು ಮೋಟಾರ್ ಪಂಪ್ಸೆಟ್ ಮೂಲಕ ಹರಿಸಿ ಅತಿಕ್ರಮಣ ಮಾಡಿಕೊಳ್ಳಲಾಗಿತ್ತು. ಈ ಕುರಿತು ಸಾರ್ವಜನಿಕರು ಮತ್ತು ಸ್ಥಳೀಯರಿಂದ ಬಂದ ದೂರುಗಳ ಮೇರೆಗೆ ಎಚ್ಚೆತ್ತ ತಾಲೂಕು ಆಡಳಿತ ಮತ್ತು ಸಂಬAಧಪಟ್ಟ ಇಲಾಖಾಧಿಕಾರಿಗಳು, ಜೆಸಿಬಿ ಯಂತ್ರಗಳೊAದಿಗೆ ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ನಡೆಸಿದರು.
ತೆರವುಗೊಳಿಸಿದ ಜಾಗದಲ್ಲಿ ‘ಇದು ಕರ್ನಾಟಕ ಸರ್ಕಾರದ ಸ್ವತ್ತು, ಇದನ್ನು ಅತಿಕ್ರಮಣ ಮಾಡುವುದು ಶಿಕ್ಷಾರ್ಹ ಅಪರಾಧ’ ಎಂಬ ಎಚ್ಚರಿಕೆ ನಾಮಫಲಕವನ್ನು ಅಳವಡಿಸಲಾಯಿತು. ಅಕ್ರಮವಾಗಿ ಅಳವಡಿಸಲಾಗಿದ್ದ ನೀರಾವರಿ ಪೈಪ್ಗಳು ಹಾಗೂ ಮೋಟಾರ್ಗಳನ್ನು ತೆರವುಗೊಳಿಸಿ, ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಯಿತು.
ಅದೇರೀತಿಯಾಗಿ ಸ್ಥಳೀಯ ಕನಕ ದುರ್ಗಮ್ಮ ಗುಡಿಯಿಂದ-ವಾಲ್ಮೀಕಿ ವೃತ್ತಕ್ಕೆ ತೆರಳುವ ಮುಖ್ಯರಸ್ತೆಯ ಪಕ್ಕದಲ್ಲಿದ್ದ್ದ ನಿವೇಶನ ಜಾಗದ ಒತ್ತುವರಿ ತೆರವು ಮಾಡಿದರು. ನಗರದ ವ್ಯಾಪ್ತಿಯಲ್ಲೇ ಬರುವ ಈ ಎರಡೂ ಜಾಗಗಳು ಕೋಟ್ಯಿಂತರ ಮೌಲ್ಯದ್ದಾಗಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು, ‘ಸರ್ಕಾರಿ ಜಮೀನು, ಕೆರೆ-ಕಟ್ಟೆ ಒತ್ತುವರಿ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ವತ್ತು ಅತಿಕ್ರಮಣಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಬಳ್ಳಾರಿ ತಾಲ್ಲೂಕು ತಹಶೀಲ್ದಾರರಾದ ಟಿ.ರೇಖಾ, ಡಿಡಿಎಲ್ಆರ್ ಪ್ರಮೋದ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಸರ್ವೇಯರ್ಗಳು, ಸ್ಥಳೀಯ ಪೋಲಿಸ್ ಠಾಣೆಯ ಸಿಬ್ಬಂದಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.
---------
Yadgir, Yadgir | Sep 12, 2026