ಶಿರಸಿ: ಕಲಕೈ ಕ್ರಾಸ್ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂವರ ಬಂಧನ
ಶಿರಸಿ: ಟಿಪ್ಪರ್ ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಕಲಕೈ ಕ್ರಾಸ್ ಬಳಿ ಮೂರು ಟಿಪ್ಪರ್ ವಶಪಡಿಸಿಕೊಂಡು ಮೂವರು ಚಾಲಕರನ್ನು ಬಂಧಿಸಿದ್ದಾರೆ. ಸಿದ್ದಾಪುರ ತಾಲೂಕಿನ ನಿಡಗೋಡನ ವಿನಯ ಷಣ್ಮುಖ ನಾಯ್ಕ (೨೭), ಅವರಗೊಪ್ಪದ ನಂದನ ನಾರಾಯಣ ನಾಯ್ಕ (೨೨), ನಾಣಿಕಟ್ಟಾ ಕಾನೆನಳ್ಳಿಯ ವಿಧ್ಯಾನಂದ ಮಹಾಬಲೇಶ್ವರ ನಾಯ್ಕ, (೩೨) ಬಂಧಿತ ಟಿಪ್ಪರ್ ಚಾಲಕರಾಗಿದ್ದಾರೆ. ಮೂವರು ಪ್ರತ್ಯೇಕ ಟಿಪ್ಪರ್ ಮೂಲಕ ಸಿದ್ದಾಪುರ ತಾಲೂಕಿನ ಮಾವಿನಹೊಳೆಯಲ್ಲಿ ಮರಳು ತೆಗೆದು ಸರ್ಕಾರಕ್ಕೆ ರಾಜಸ್ವಧನ ಸಲ್ಲಿಸದೇ, ಪಾಸ್ ಇಲ್ಲದೇ ಸಿದ್ದಾಪುರ ಕಡೆಯಿಂದ ಶಿರಸಿ ಕಡೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾಗ ದಾಳಿ ನಡೆಸಲಾಗಿದೆ.