
ಗರ್ಭಿಣಿ ಎಂಬುದು ತಿಳಿಯದೆ ಒಂದೇ ದಿನ 100 ಸಿಗರೇಟ್ ಸೇದಿದ್ದೆ; ಆಲಿಯಾ ಭಟ್ ತಾಯಿ ಸೋನಿ ರಜ್ದಾನ್ ಶಾಕಿಂಗ್ ಹೇಳಿಕೆ!
1993ರಲ್ಲಿ ‘ಗುಮ್ರಾ’ ಚಿತ್ರದ ಚಿತ್ರೀಕರಣದ ವೇಳೆ ನಡೆದ ಘಟನೆ ಬಹಿರಂಗ; ಧೂಮಪಾನದ ದೃಶ್ಯಕ್ಕಾಗಿ ಒಂದೇ ದಿನ ಸುಮಾರು 100 ಸಿಗರೇಟ್ ಸೇದಿದ್ದ ನಟಿ – ಆ ಸಮಯದಲ್ಲಿ ತಮ್ಮ ಗರ್ಭದಲ್ಲಿ ಆಲಿಯಾ ಭಟ್ ಇದ್ದರು ಎಂಬುದು ಸೋನಿ ರಜ್ದಾನ್ಗೆ ತಿಳಿದಿರಲಿಲ್ಲ!
ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರ ತಾಯಿ ಹಾಗೂ ಹಿರಿಯ ನಟಿ ಸೋನಿ ರಜ್ದಾನ್ ತಮ್ಮ ಗರ್ಭಾವಸ್ಥೆಯ ದಿನಗಳಲ್ಲಿನ ಅಚ್ಚರಿಯ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಆಲಿಯಾ ಭಟ್ ಗರ್ಭದಲ್ಲಿದ್ದಾಗ ತಾವು ಗರ್ಭಿಣಿ ಎಂಬುದು ತಿಳಿಯದೆ ಒಂದೇ ದಿನ ಸುಮಾರು 100 ಸಿಗರೇಟ್ ಸೇದಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.
1993ರಲ್ಲಿ ‘ಗುಮ್ರಾ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಚಿತ್ರದ ದೃಶ್ಯವೊಂದರಲ್ಲಿ ಧೂಮಪಾನ ಮಾಡಬೇಕಾಗಿದ್ದರಿಂದ ಸೋನಿ ರಜ್ದಾನ್ ಒಂದೇ ದಿನದಲ್ಲಿ ಸುಮಾರು 100 ಸಿಗರೇಟ್ ಸೇದಿದ್ದರು. ಆದರೆ ಆ ಸಂದರ್ಭದಲ್ಲಿ ತಾವು ಗರ್ಭಿಣಿ ಎಂಬುದು ಅವರಿಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ತಾವು ಸಾಮಾನ್ಯವಾಗಿ ಧೂಮಪಾನ ಮಾಡುವವರಲ್ಲ. ಆದರೆ ಆ ದೃಶ್ಯದ ಚಿತ್ರೀಕರಣದ ಬಳಿಕ ಸಿಗರೇಟ್ ಸೇದುವ ಹಂಬಲ ಉಂಟಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಆಲಿಯಾ ಗರ್ಭದಲ್ಲಿದ್ದಾಗಲೇ ನೇಣು ಹಾಕಿಕೊಳ್ಳುವ ದೃಶ್ಯವನ್ನೂ ಚಿತ್ರೀಕರಿಸಿದ್ದಾಗಿ ತಿಳಿಸಿದ್ದಾರೆ.
ಗರ್ಭಾವಸ್ಥೆಯಲ್ಲೂ ಮುಂದುವರಿದ ಚಿತ್ರೀಕರಣ
ಕೆಲವು ಸಮಯದ ಬಳಿಕ ಚಿತ್ರೀಕರಣಕ್ಕೆ ವಿರಾಮ ಸಿಕ್ಕಿತ್ತು. ಆ ಅವಧಿಯಲ್ಲಿ ತಾವು ಗರ್ಭಿಣಿ ಎಂಬುದು ಸೋನಿ ರಜ್ದಾನ್ಗೆ ತಿಳಿದಿತ್ತು. ಸುಮಾರು ಐದು ತಿಂಗಳ ನಂತರ ಮತ್ತೆ ಚಿತ್ರೀಕರಣಕ್ಕೆ ಮರಳಿದಾಗ ಹೊಟ್ಟೆ ಕಾಣಿಸದಂತೆ ಅದೇ ರೀತಿಯ ಉಡುಪು ಧರಿಸಿ ಶೂಟಿಂಗ್ ಮುಂದುವರಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು 1986ರಲ್ಲಿ ಮೊದಲ ಪುತ್ರಿ ಶಾಹೀನ್ ಭಟ್ ಗರ್ಭದಲ್ಲಿದ್ದಾಗಲೂ ‘ಬುನಿಯಾದ್’ ಧಾರಾವಾಹಿಯ ಚಿತ್ರೀಕರಣದಲ್ಲಿ ಸೋನಿ ಭಾಗವಹಿಸಿದ್ದರು.
ನಿರ್ದೇಶಕ ಮಹೇಶ್ ಭಟ್ ಅವರನ್ನು ವಿವಾಹವಾಗಿರುವ ಸೋನಿ ರಜ್ದಾನ್ ಅವರಿಗೆ ಇಬ್ಬರು ಪುತ್ರಿಯರು. 1988ರಲ್ಲಿ ಶಾಹೀನ್ ಭಟ್ ಹಾಗೂ 1993ರಲ್ಲಿ ಆಲಿಯಾ ಭಟ್ ಜನಿಸಿದ್ದಾರೆ. ಇದೀಗ ಸೋನಿ ರಜ್ದಾನ್ ಹಂಚಿಕೊಂಡಿರುವ ಈ ಹಳೆಯ ಅನುಭವ ಬಾಲಿವುಡ್ ವಲಯದಲ್ಲಿ ಗಮನ ಸೆಳೆದಿದೆ.
Yadgir, Yadgir | Nov 17, 2026