
ಹಾಸನದಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿ; ಎಚ್ಚೆತ್ತ ಸರ್ಕಾರದಿಂದ 10 ಆನೆಗಳ ಸೆರೆಗೆ ಆದೇಶ!
ಎರಡು ದಿನಗಳ ಅಂತರದಲ್ಲಿ ಇಬ್ಬರು ಮೃತಪಟ್ಟ ಬೆನ್ನಲ್ಲೇ ಮಾನವ-ಆನೆ ಸಂಘರ್ಷ ತಡೆಗೆ ಸರ್ಕಾರದ ಕ್ರಮ; ಗುರುತಿಸಲಾದ 10 ಗಂಡು ಕಾಡಾನೆಗಳನ್ನು ಸೆರೆಹಿಡಿದು ಸೂಕ್ತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಅನುಮತಿ!
ಹಾಸನ, ನವೆಂಬರ್ 16: ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಗೆ ಇಬ್ಬರು ಬಲಿಯಾದ ಘಟನೆ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿ ಆನೆಗಳ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಮಾನವ-ಆನೆ ಸಂಘರ್ಷಕ್ಕೆ ಕಾರಣವಾಗಿರುವ 10 ಗಂಡು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಆದೇಶಿಸಿದೆ.
ಬೇಲೂರು ತಾಲೂಕಿನ ಚೌಡನಹಳ್ಳಿಯಲ್ಲಿ ಶನಿವಾರ ಜಯಮ್ಮ ಹಾಗೂ ಇಂದು ನಾಗೇನಹಳ್ಳಿ ಗ್ರಾಮದಲ್ಲಿ ಹಫೀಝುರ್ ರೆಹಮಾನ್ ಕಾಡಾನೆ ದಾಳಿಗೆ ಮೃತಪಟ್ಟಿದ್ದರು. ಸತತ ಸಾವುಗಳ ಹಿನ್ನೆಲೆಯಲ್ಲಿ ರಾಜ್ಯ ಪ್ರಧಾನ ವನ್ಯಜೀವಿ ಸಂರಕ್ಷಣಾಧಿಕಾರಿಗಳು ಈ ಮಹತ್ವದ ಸೂಚನೆ ನೀಡಿದ್ದಾರೆ.
10 ಕಾಡಾನೆಗಳ ಸೆರೆಗೆ ಅನುಮತಿ
ಹಾಸನ ಅರಣ್ಯ ವಿಭಾಗದಲ್ಲಿ ಮಾನವ-ಆನೆ ಸಂಘರ್ಷಕ್ಕೆ ಕಾರಣವಾಗಿರುವ 10 ಗಂಡು ಕಾಡಾನೆಗಳನ್ನು ಗುರುತಿಸಿ ಸೆರೆಹಿಡಿಯಲು ಆದೇಶಿಸಲಾಗಿದೆ. ಜನರ ಪ್ರಾಣಹಾನಿ ಹಾಗೂ ಮುಂದಿನ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ವನ್ಯಜೀವಿ (ರಕ್ಷಣಾ) ಕಾಯ್ದೆ 1972ರ ಸೆಕ್ಷನ್ 11(1)(ಎ) ಅಡಿಯಲ್ಲಿ ಅನುಮತಿ ನೀಡಲಾಗಿದೆ.
ಸೆರೆಹಿಡಿದ ಆನೆಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಅವುಗಳ ವಾಸಕ್ಕೆ ಸೂಕ್ತವಾದ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತದೆ. ಕಾರ್ಯಾಚರಣೆಗೆ ಸಾಕಾನೆ ತಂಡದ ಎ ಮತ್ತು ಸಿ ಕುಮ್ಕಿ ಆನೆಗಳನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ಹಾಸನ-ಚಿಕ್ಕಮಗಳೂರು ಗಡಿಯಲ್ಲಿ 53 ಆನೆಗಳ ಹಿಂಡು ಪ್ರತ್ಯಕ್ಷ!
ಇನ್ನೊಂದೆಡೆ, ಹಾಸನ-ಚಿಕ್ಕಮಗಳೂರು ಗಡಿ ಭಾಗದಲ್ಲಿ 53 ಕಾಡಾನೆಗಳ ಬೃಹತ್ ಹಿಂಡು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದ ಸಮೀಪವೇ ಆನೆಗಳು ಕಾಣಿಸಿಕೊಂಡಿದ್ದು, ಗ್ರಾಮಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕಾಫಿ ತೋಟಗಳ ಕಾರ್ಮಿಕರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಯನ್ನೂ ಸ್ಥಳದಲ್ಲಿ ನಿಯೋಜಿಸಲಾಗಿದೆ.
#YadgirNews #Hassan #HassanNews #ElephantAttack #WildElephants #HumanElephantConflict #ElephantRescue #ElephantCapture #ForestDepartment #KarnatakaNews #KarnatakaGovernment #WildlifeProtection #53Elephants #Belur #Mudigere #Chikkamagaluru #BreakingNews #LatestNews #IndiaNews #WildlifeNews
Yadgir, Yadgir | Nov 17, 2026