
ಯಾದಗಿರಿ ನಟ ನಿರ್ದೇಶಕ ಭಾನುಪ್ರಕಾಶರ ‘ಸತ್ಯ ಇನ್ ಸೌಜನ್ಯ’ ಚಿತ್ರದ ಪೋಸ್ಟರ್ ಬಿಡುಗಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಯಾದಗಿರಿ: ಜಿಲ್ಲೆಯ ಗುರುಮಠಕಲ್ ಮೂಲದ ನಟ ನಿರ್ದೇಶಕ ಭಾನುಪ್ರಕಾಶ ಉತ್ತರ ಕರ್ನಾಟಕದ ಪ್ರತಿಭಾವಂತ ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದೊಂದಿಗೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ‘ಸತ್ಯ ಇನ್ ಸೌಜನ್ಯ’ ಚಿತ್ರದ ಪೋಸ್ಟರ್ ಅನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಬಕಾರಿ ಸಚಿವರಾದ ಶಿವಲಿಂಗೇಗೌಡರು, ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಾದ ಕೆ.ವಿ. ಪ್ರಭಾಕರ್ ಹಾಗೂ ಚಿತ್ರದಲ್ಲಿ ನಾಯಕಿಯಾಗಿ ಶ್ರದ್ಧಾ ಮಂಜುನಾಥ್ ಅಭಿನಯಿಸುತ್ತಿದ್ದು, ಸಹಕಲಾವಿದರಾಗಿ ಯಂಗ್ ಸ್ಟಾರ್ ಮಾಲಗತ್ತಿ, ಎಸ್. ನಿಜಲಿಂಗಪ್ಪ ಪೂಜಾರಿ, ಶ್ರೀಮತಿ ಮಲ್ಲಿಕಾ ಸುದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಚಿತ್ರದ ಕಥಾಹಂದರವನ್ನು ಆಲಿಸಿದ ಸಿದ್ದರಾಮಯ್ಯ ಅವರು ಕಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರತಂಡದ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೆ, ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ತಮಗೂ ಮಾಹಿತಿ ನೀಡುವಂತೆ ತಿಳಿಸಿ, ಸಿನಿಮಾ ವೀಕ್ಷಿಸುವುದಾಗಿ ಭರವಸೆ ನೀಡಿದ್ದಾರೆ. ಗಣ್ಯರ ಈ ಪ್ರೋತ್ಸಾಹ ಚಿತ್ರತಂಡದಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಜಿಲ್ಲೆಯ ಪ್ರತಿಭೆಯ ಕೊಡುಗೆ:
ಯಾದಗಿರಿ ಮೂಲದ ಭಾನುಪ್ರಕಾಶ್ ಅವರು ತಮ್ಮ ಮಹದೇವ್ ಫಿಲಂ ಪ್ರೊಡಕ್ಷನ್ ಸಂಸ್ಥೆಯ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುವುದರ ಜೊತೆಗೆ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಇವರ ನಿರ್ಮಾಣ ಸಂಸ್ಥೆಯಿAದ ‘ಸೈದಾಪುರ’ ಚಿತ್ರ ತೆರೆಕಂಡಿದ್ದು, ‘ಅಂತಿಮಯಾತ್ರೆ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ನೈಜ ಘಟನೆಗಳ ಆಧಾರಿತ ವಿಭಿನ್ನ ಕಥಾಹಂದರ
ಪ್ರಸ್ತುತ ಸಮಾಜದಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಆಧರಿಸಿ, ಕಮರ್ಷಿಯಲ್ ಅಂಶಗಳೊAದಿಗೆ ‘ಸತ್ಯ ಇನ್ ಸೌಜನ್ಯ’ ಚಿತ್ರದ ಕಥೆಯನ್ನು ರೂಪಿಸಲಾಗಿದೆ. ಸಮಾಜದಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿ ಮೂಡಿಸುವುದು ಹಾಗೂ ಇಂತಹ ಘಟನೆಗಳಿಂದ ವ್ಯಕ್ತಿಗಳು ಮತ್ತು ಸಮಾಜದ ಮೇಲೆ ಉಂಟಾಗುವ ಪರಿಣಾಮಗಳನ್ನು ಪ್ರೇಕ್ಷಕರಿಗೆ ತಲುಪಿಸುವುದು ಚಿತ್ರದ ಪ್ರಮುಖ ಉದ್ದೇಶವಾಗಿದೆ.
ಎಲ್ಲವೂ ಯೋಜನೆಯಂತೆ ನಡೆದರೆ ಮುಂದಿನ ವಾರದಿಂದ ಯಾದಗಿರಿ, ರಾಯಚೂರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರದ ನಾಯಕ, ನಿರ್ಮಾಪಕ ಹಾಗೂ ನಿರ್ದೇಶಕ ಭಾನುಪ್ರಕಾಶ್ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಸ್ಥಳೀಯ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಲಾಗುತ್ತಿದ್ದು, ಗಣ್ಯರ ಪ್ರೋತ್ಸಾಹ ಮತ್ತು ಆಶೀರ್ವಾದದಿಂದ ಚಿತ್ರತಂಡ ಮತ್ತಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದೆ.
ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಈ ಚಿತ್ರಕ್ಕೆ ಪ್ರೋತ್ಸಾಹ ಮತ್ತು ಬೆಂಬಲ ನೀಡಬೇಕೆಂದು ಚಿತ್ರತಂಡ ಮನವಿ ಮಾಡಿದೆ.
Yadgir, Yadgir | Nov 17, 2026