ಯಶವಂತಪುರ APMCಗೆ ಡಿಕೆಶಿ ದಿಢೀರ್ ಭೇಟಿ: ರೈತರ ಸಮಸ್ಯೆ ಆಲಿಕೆ
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬೆಳಗ್ಗೆ ಯಶವಂತಪುರ APMC ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ರೈತರು, ವರ್ತಕರು ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿದರು.
ಈರುಳ್ಳಿ ಮಂಡಿಯಲ್ಲಿ ರೈತರೊಂದಿಗೆ ಕುಳಿತು ಮಾತುಕತೆ ನಡೆಸಿದ ಡಿ.ಕೆ. ಶಿವಕುಮಾರ್ ಅವರು ಬೆಲೆ, ತೂಕದಲ್ಲಿ ಮೋಸ, ಮಧ್ಯವರ್ತಿಗಳ ಹಾವಳಿ ಹಾಗೂ ಕಮಿಷನ್ ಕುರಿತು ಮಾಹಿತಿ ಪಡೆದರು.
ಈ ವೇಳೆ ರೈತರು ಮಾರುಕಟ್ಟೆಯ ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 65 ಕೆಜಿ ಮೂಟೆಯನ್ನು 50 ಕೆಜಿ ಎಂದು ಲೆಕ್ಕ ಹಾಕಲಾಗುತ್ತಿದೆ ಹಾಗೂ ಮಧ್ಯವರ್ತಿಗಳ ಹಾವಳಿ ಇದೆ ಎಂದು ಆರೋಪಿಸಿದರು.
ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಕೊರತೆಯ ಬಗ್ಗೆಯೂ ರೈತರು ದೂರು ನೀಡಿದರು. “30–40 ವರ್ಷಗಳಿಂದ APMCಗೆ ಯಾರೂ ಬಂದಿಲ್ಲ, ಕೃಷಿ ಸಚಿವರೂ ಬಂದಿಲ್ಲ” ಎಂದು ಕೆಲ ರೈತರು ಡಿಕೆಶಿ ಮುಂದೆ ಅಳಲು ತೋಡಿಕೊಂಡರು.
ಭೇಟಿ ವೇಳೆ ಕೂಲಿ ಕಾರ್ಮಿಕರೊಂದಿಗೆ ರಸ್ತೆಬದಿಯ ಪೆಟ್ಟಿಗೆ ಅಂಗಡಿಯಲ್ಲಿ ಇಡ್ಲಿ ಸೇವಿಸಿದ ಡಿ.ಕೆ. ಶಿವಕುಮಾರ್ ಅವರು ಗಮನ ಸೆಳೆದರು. ರೈತರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿದ ಅವರು, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ರೈತರ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.
#DKShivakumar #YeshwanthpurAPMC #Farmers #Karnataka #Bengaluru #APMC #FarmersIssues #KarnatakaNews #BreakingNews #KannadaNews #Congress
Yadgir, Yadgir | Sep 8, 2026