
ದೀಪಾವಳಿ ಸಂಭ್ರಮದ ನಡುವೆ ಗುಂಡಿನ ಸದ್ದು; ಪಟಾಕಿ ಸಿಡಿಸುತ್ತಿದ್ದ ಕುಸ್ತಿಪಟುವನ್ನು ಗುಂಡಿಕ್ಕಿ ಹತ್ಯೆ!
ಪಂಜಾಬ್: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ದುಃಖದ ವಾತಾವರಣ ಆವರಿಸಿದೆ. ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದ 27 ವರ್ಷದ ಕುಸ್ತಿಪಟುವನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್ನ ಕಪುರ್ತಲಾದಲ್ಲಿ ನಡೆದಿದೆ.
ಮೃತನನ್ನು ಕಪುರ್ತಲಾದ ಮೆಹ್ತಾಬ್ಗಢ ಮೊಹಲ್ಲಾ ನಿವಾಸಿ ಮಣಿ ಅಲಿಯಾಸ್ ಪೈಲ್ವಾನ್ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದ ವೇಳೆ ಬಂದ ದುಷ್ಕರ್ಮಿಗಳು ಏಕಾಏಕಿ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಮಣಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆಗೂ ಮುನ್ನವೇ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮೃತ ಮಣಿಯ ತಂದೆ ಬಗ್ಗಾ ಅವರ ಪ್ರಕಾರ, ಇತ್ತೀಚೆಗಷ್ಟೇ ಮಣಿಗೆ ಮದುವೆಯಾಗಿತ್ತು. ಆತನಿಗೆ ಯಾರೊಂದಿಗೂ ವೈಯಕ್ತಿಕ ವೈಷಮ್ಯವಾಗಲಿ, ಜಗಳವಾಗಲಿ ಇರಲಿಲ್ಲ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂಜೆ ಸುಮಾರು 7:30ರ ವೇಳೆಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಗೆ ನಾಲ್ವರು ಸಹೋದರಿಯರಿದ್ದು, ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈ ಘಟನೆ ಆಘಾತ ತಂದಿದೆ. ಹಬ್ಬದ ಸಂತೋಷದ ನಡುವೆ ನಡೆದ ಕುಸ್ತಿಪಟುವಿನ ಹತ್ಯೆಯಿಂದ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
#PunjabNews #Kapurthala #WrestlerMurder #WrestlerKilled #DiwaliTragedy #ShootingIncident #BreakingNews #CrimeNews #PunjabCrime #MurderCase #GunFiring #DiwaliCelebration #IndianNews #CrimeUpdate #PoliceInvestigation #YadgirNews #YadgirNewsKannada #BigNews
Yadgir, Yadgir | Nov 14, 2026