
ತಾಯಿಯ ಅಂತ್ಯಕ್ರಿಯೆಗೆ ಉಡುಪಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ; ತಾಯಿಯ ಮೃತದೇಹ ಕಂಡು ಕಣ್ಣೀರಿಟ್ಟ ಗ್ಯಾಂಗ್ಸ್ಟರ್!
ಉಡುಪಿ: ಭೂಗತ ಲೋಕದಲ್ಲಿ ಕುಖ್ಯಾತಿ ಗಳಿಸಿದ್ದ ರವಿ ಪೂಜಾರಿ, ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಉಡುಪಿಗೆ ಆಗಮಿಸಿದ್ದಾನೆ. ತಾಯಿಯ ಮೃತದೇಹವನ್ನು ನೋಡುತ್ತಿದ್ದಂತೆಯೇ ಭಾವುಕನಾದ ರವಿ ಪೂಜಾರಿ, ಬಿಕ್ಕಿ ಬಿಕ್ಕಿ ಅತ್ತು ಕುಸಿದು ಕುಳಿತ ಘಟನೆ ಗಮನ ಸೆಳೆದಿದೆ.
ತಾಯಿಯ ಅಂತಿಮ ದರ್ಶನಕ್ಕೆ ಆಗಮನ
ಉಡುಪಿ ಮೂಲದ ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರಿ ಗುರುವಾರ ರಾತ್ರಿ ನಿಧನರಾಗಿದ್ದಾರೆ. ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ, ಶನಿವಾರ ಬೆಳಗ್ಗೆ ಮಲ್ಪೆ ಸಮೀಪದ ನೆರ್ಗಿಯಲ್ಲಿರುವ ಹಿರಿಯರ ಮನೆಗೆ ರವಿ ಪೂಜಾರಿಯನ್ನು ಕರೆತರಲಾಯಿತು.
ಬೆಂಗಳೂರಿನಿಂದ ಕಾರಾಗೃಹ ಇಲಾಖೆಯ ಪೊಲೀಸರ ಬಿಗಿ ಭದ್ರತೆಯಲ್ಲಿ ಉಡುಪಿಗೆ ಆಗಮಿಸಿದ ಆತ, ತಾಯಿಯ ಮೃತದೇಹದ ಮುಂದೆ ಕೆಲಕಾಲ ಮೌನವಾಗಿ ನಿಂತು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾನೆ. ಬಳಿಕ ಭಾವುಕನಾಗಿ ಕಣ್ಣೀರಿಟ್ಟಿದ್ದಾನೆ. ಅಂತ್ಯಕ್ರಿಯೆಯ ವಿಧಿವಿಧಾನಗಳಿಗೆ ಸಿದ್ಧತೆ ನಡೆಸಲಾಗಿದೆ.
ರವಿ ಪೂಜಾರಿಯ ಭದ್ರತೆಗಾಗಿ ಉಡುಪಿಯಲ್ಲಿಯೂ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಈ ಕುರಿತು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
ಸೆನೆಗಲ್ನಲ್ಲಿ ಬಂಧನವಾಗಿದ್ದ ಪಾತಕಿ
ಛೋಟಾ ರಾಜನ್ನ ಸಹಚರನಾಗಿದ್ದ ರವಿ ಪೂಜಾರಿ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೊಲೆ, ಕೊಲೆ ಯತ್ನ, ಜೀವ ಬೆದರಿಕೆ ಹಾಗೂ ಹಫ್ತಾ ವಸೂಲಿ ಸೇರಿದಂತೆ 90ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಸುಮಾರು 26 ವರ್ಷಗಳ ಕಾಲ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು 2019ರಲ್ಲಿ ಪಶ್ಚಿಮ ಆಫ್ರಿಕಾದ ಸೆನೆಗಲ್ನಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು.
ಆರು ವರ್ಷಗಳಿಂದ ಬೆಂಗಳೂರಿನ ಜೈಲಿನಲ್ಲಿ
ಬಂಧನದ ಬಳಿಕ ರವಿ ಪೂಜಾರಿಯ ವಿರುದ್ಧದ ವಿವಿಧ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಕಳೆದ ಆರು ವರ್ಷಗಳಿಂದ ಬೆಂಗಳೂರಿನ ಜೈಲಿನಲ್ಲಿ ಆತ ಇದ್ದಾನೆ. ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನ್ಯಾಯಾಲಯ ಅನುಮತಿ ನೀಡಿದ್ದು, ಪೊಲೀಸ್ ಭದ್ರತೆ ಮತ್ತು ಪ್ರಯಾಣದ ಸಂಪೂರ್ಣ ವೆಚ್ಚವನ್ನು ರವಿಯೇ ಭರಿಸಬೇಕು ಎಂದು ಷರತ್ತು ವಿಧಿಸಿದೆ. ಅಂತ್ಯಕ್ರಿಯೆ ಮುಗಿದ ಕೂಡಲೇ ಆತನನ್ನು ಮತ್ತೆ ಜೈಲಿಗೆ ಕರೆದೊಯ್ಯುವಂತೆ ನ್ಯಾಯಾಲಯ ಸೂಚಿಸಿದೆ.
ಸೆನೆಗಲ್ನಲ್ಲಿ ಹೋಟೆಲ್ ಉದ್ಯಮ
ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಸಂದರ್ಭದಲ್ಲಿ ರವಿ ಪೂಜಾರಿ ಸೆನೆಗಲ್ನಲ್ಲಿ 'ನಮಸ್ತೆ ಇಂಡಿಯಾ' ಹೆಸರಿನ ರೆಸ್ಟೋರೆಂಟ್ ಉದ್ಯಮ ನಡೆಸುತ್ತಿದ್ದ ಎನ್ನಲಾಗಿದೆ. ಪಶ್ಚಿಮ ಆಫ್ರಿಕಾದಲ್ಲಿ ಹಲವು ಮಳಿಗೆಗಳನ್ನು ಹೊಂದಿದ್ದ ಆತ, ಆಂಥೋನಿ ಫೆರ್ನಾಂಡಿಸ್ ಎಂಬ ಹೆಸರಿನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ ಎಂಬ ಮಾಹಿತಿ ಇದೆ.
ಪತ್ನಿ, ಮಕ್ಕಳು ಹಾಗೂ ಕುಟುಂಬ
ರವಿ ಪೂಜಾರಿ ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಕಲ್ಮಾಡಿ ಬಪ್ಪುತೋಟದಲ್ಲಿ ಜನಿಸಿದ್ದ. ಆತನ ಪತ್ನಿ ಪದ್ಮಾ ಪೂಜಾರಿ, ಒಬ್ಬ ಮಗ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ತಂದೆ ಸೂರ್ಯ ಪೂಜಾರಿ ಮತ್ತು ತಾಯಿ ಸುಶೀಲಾ ಪೂಜಾರಿ ಅವರಿಗೆ ಐವರು ಮಕ್ಕಳಿದ್ದು, ರವಿ ಪೂಜಾರಿ ಎರಡನೇ ಮಗನಾಗಿದ್ದಾನೆ.
ಹಲವು ವರ್ಷಗಳ ಬಳಿಕ ಹುಟ್ಟೂರಿಗೆ ಭೇಟಿ
ರವಿ ಪೂಜಾರಿಯ ತಂದೆ ಮುಂಬೈನಲ್ಲಿ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ರವಿ ತನ್ನ ಬಾಲ್ಯವನ್ನು ಮಲ್ಪೆಯಲ್ಲೇ ಕಳೆದಿದ್ದು, ಎಸ್ಎಸ್ಎಲ್ಸಿ ಶಿಕ್ಷಣವನ್ನೂ ಪಡೆದಿದ್ದ. ಅಪರಾಧ ಜಗತ್ತಿಗೆ ಪ್ರವೇಶಿಸಿದ ಬಳಿಕ ಹುಟ್ಟೂರಿನ ಸಂಪರ್ಕದಿಂದ ದೂರವಾಗಿದ್ದ ಆತ, 1992-93ರಲ್ಲಿ ಸಹೋದರಿಯ ಮದುವೆಗೆ ಬಂದಿದ್ದೇ ಕೊನೆಯಾಗಿತ್ತು ಎನ್ನಲಾಗಿದೆ.
ದಶಕಗಳ ಬಳಿಕ ತಾಯಿಯ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಹುಟ್ಟೂರಿಗೆ ಮರಳಿದ್ದಾನೆ.
Yadgir, Yadgir | Nov 14, 2026