ಅಕ್ರಮ ಮರಳು ಮಾಫಿಯಾ ತಡೆಯುವಲ್ಲಿ ವಿಫಲ; ಪರೋಕ್ಷ ಬೆಂಬಲದ ಆರೋಪ – PSI ಸೇರಿ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು!
ಕೋಲಾರ: ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿಯಿಂದ ಕೆರೆ-ಕಟ್ಟೆಗಳು ಬತ್ತುತ್ತಿರುವ ನಡುವೆಯೇ ಅಕ್ರಮ ಫಿಲ್ಟರ್ ಮರಳು ದಂಧೆ ಜೋರಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಕ್ರಮ ಮರಳು ಮಾಫಿಯಾವನ್ನು ನಿಯಂತ್ರಿಸುವಲ್ಲಿ ವಿಫಲರಾಗಿರುವುದು ಹಾಗೂ ದಂಧೆಗೆ ಪರೋಕ್ಷವಾಗಿ ಬೆಂಬಲ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ನಂಗಲಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಓರ್ವ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಂಗಲಿ ಪೊಲೀಸ್ ಠಾಣೆಯ ಪಿಎಸ್ಐ ವಿದ್ಯಾಶ್ರೀ ಹಾಗೂ ಎಸ್ಬಿ ಕಾನ್ಸ್ಟೆಬಲ್ ಪ್ರವೀಣ್ ಅಮಾನತುಗೊಂಡವರು. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕನ್ನಿಕಾ ಸಿಕ್ರಿವಾಲ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಇನ್ನು ಶುಕ್ರವಾರ ರಾತ್ರಿ ಮುಳಬಾಗಿಲು ಎಎಸ್ಪಿ ಮೋನಿಷಾ ಅವರು ನಂಗಲಿ ದೊಡ್ಡ ಕೆರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಫಿಲ್ಟರಿಂಗ್ ಘಟಕದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಒಂದು ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿಯನ್ನು ವಶಕ್ಕೆ ಪಡೆಯಲಾಗಿದೆ.
ದಾಳಿಯ ಕುರಿತು ಎಎಸ್ಪಿ ಮೋನಿಷಾ ಅವರು ಸಲ್ಲಿಸಿದ ವರದಿಯ ಆಧಾರದ ಮೇಲೆ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅವರು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಅಕ್ರಮ ಮರಳು ದಂಧೆ ನಡೆಯುತ್ತಿದ್ದ ಪ್ರಕರಣ ಇದೀಗ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.
#IllegalSandMining #SandMafia #KolarNews #NangaliPolice #PoliceSuspension #PSISuspended #KarnatakaPolice #ASPAction #SPAction #IllegalSandTrade #SandMiningRaid #Mulbagal #KolarDistrict #PoliceDepartment #JCBSeized #TractorSeized #BreakingNews #KarnatakaNews #YadgirNews