ಕುಂಕುಮ ಕೇಳಿದ್ದಕ್ಕೆ ಭಕ್ತರ ಮೇಲೆ ಅರ್ಚಕರಿಂದ ಹಲ್ಲೆ ಆರೋಪ!
ರಾಮನಗರ: ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ಕುಟುಂಬದವರ ಮೇಲೆ ಕುಂಕುಮ ಕೇಳಿದ ವಿಚಾರಕ್ಕೆ ಅರ್ಚಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಪ್ರಸಿದ್ಧ ಕಬ್ಬಾಳಮ್ಮ ದೇವಾಲಯದಲ್ಲಿ ಈ ಘಟನೆ ನಡೆದಿದೆ.
ಕಿಟ್ಟಪ್ಪನದೊಡ್ಡಿ ಗ್ರಾಮದ ರವಿ ಎಂಬುವವರು ಇಂದು ಬೆಳಿಗ್ಗೆ ಕುಟುಂಬ ಸಮೇತರಾಗಿ ಕಬ್ಬಾಳಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಪೂಜೆ ಮುಗಿದ ಬಳಿಕ ರವಿ ಹಾಗೂ ಕುಟುಂಬಸ್ಥರು ಅರ್ಚಕರ ಬಳಿ ಕುಂಕುಮ ಕೇಳಿದ್ದಾರೆ.
ಈ ವೇಳೆ ಕುಂಕುಮ ಕೇಳಿದ ವಿಚಾರಕ್ಕೆ ಅರ್ಚಕರು ಅವಾಚ್ಯ ಶಬ್ದಗಳಿಂದ ನಿಂದಿಸಿ, ರವಿ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅರ್ಚಕರಾದ ಕೃಷ್ಣಗೌಡ, ತೇಜು ಹಾಗೂ ಕಿರಣ್ ವಿರುದ್ಧ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ದೇವರ ದರ್ಶನ ಹಾಗೂ ಪೂಜೆಗಾಗಿ ಭಕ್ತಿಯಿಂದ ದೇವಸ್ಥಾನಕ್ಕೆ ಬರುವ ಭಕ್ತರೊಂದಿಗೆ ಇಂತಹ ವರ್ತನೆ ತೋರಿದ ಆರೋಪ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Yadgir, Yadgir | Nov 14, 2026