ಗುಂಡ್ಲುಪೇಟೆ: ಅರೇಪುರ ಗೇಟ್ ನಲ್ಲಿ ಕಾರು ಡಿಕ್ಕಿಯಾಗಿ ಸವಾರ ಸಾವು; ಡಿಕ್ಕಿ ರಭಸಕ್ಕೆ ಹೊತ್ತಿ ಉರಿದ ಬೈಕ್
ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸವಾರ ಮೃತಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕಿನ ಅರೇಪುರ ಗೇಟ್ ನಲ್ಲಿ ತಡರಾತ್ರಿ ನಡೆದಿದೆ. ಕೇರಳದ ಕಲ್ಪೆಟ ಮೂಲದ ರಫತ್(23) ಎಂಬಾತ ಮೃತ ಬೈಕ್ ಸವಾರ. ಕೇರಳದಿಂದ ಬೈಕ್ ನಲ್ಲಿ ಮೈಸೂರಿನಿಗೆ ಈತ ತೆರಳುತ್ತಿದ್ದ ಮೈಸೂರು ಕಡೆಯಿಂದ ಬಂದ ತವೆರಾ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸ್ಥಳದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು ಡಿಕ್ಕಿ ರಭಸಕ್ಕೆ ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಬೇಗೂರು ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.