
ದಂಡದ ಬದಲು ಹೆಲ್ಮೆಟ್ ನೀಡಿದ ಸಂಚಾರಿ ಪೊಲೀಸ್ – ಚಾಲಕರಲ್ಲಿ ಜಾಗೃತಿ
ಬಸವಕಲ್ಯಾಣ:
ದ್ವಿಚಕ್ರ ವಾಹನ ಅಪಘಾತಗಳಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಸವಾರರು ಜೀವ ಕಳೆದುಕೊಳ್ಳುವುದನ್ನು ತಡೆಯುವ ಉದ್ದೇಶದಿಂದ, ಬೀದರ ಜಿಲ್ಲಾ ಪೊಲೀಸ್ ಹಾಗೂ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಅಪರೂಪದ ಜಾಗೃತಿ ಅಭಿಯಾನವೊಂದನ್ನು ಹಮ್ಮಿಕೊಳ್ಳಲಾಗಿತ್ತು. ನಿಯಮ ಉಲ್ಲಂಘಿಸಿದ ಸವಾರರಿಗೆ ದಂಡ ವಿಧಿಸುವ ಬದಲು ಉಚಿತವಾಗಿ ಹೆಲ್ಮೆಟ್ ವಿತರಿಸಿ, ರಸ್ತೆ ಸುರಕ್ಷತೆ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.
ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಾನ್ಯ ಪ್ರದೀಪ್ ಗುಂಟಿ (ಐ.ಪಿ.ಎಸ್.) ರವರ ನಿರ್ದೇಶನದಂತೆ ಈ ಕಾರ್ಯಕ್ರಮ ಜರುಗಿತು. ಜಿಲ್ಲೆಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಾವಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಸಂಕಲ್ಪದೊಂದಿಗೆ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಶೇಷ ಕಾರ್ಯಚರಣೆ ನಡೆಸಲಾಯಿತು.
ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಮತಿ ಸುಜಾತಾ ರವರ ನೇತೃತ್ವದಲ್ಲಿ, ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಲ್ಮೆಟ್ ಧರಿಸದೇ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆದು ನಿಲ್ಲಿಸಿದರು. ಈ ವೇಳೆ ಸವಾರರಿಗೆ ದಂಡ ಹಾಕುವ ಬದಲು, ಹೆಲ್ಮೆಟ್ ವಿತರಿಸಿ ಅವರ ಕುಟುಂಬ ಹಾಗೂ ಅವಲಂಬಿತರ ಭವಿಷ್ಯದ ಬಗ್ಗೆ ಯೋಚಿಸುವಂತೆ ತಿಳಿಹೇಳಿದರು.
"ಹೆಲ್ಮೆಟ್ ಧರಿಸಿ - ಪ್ರಾಣ ಉಳಿಸಿ" ಎಂಬ ಸಂದೇಶದೊಂದಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಮನವರಿಕೆ ಮಾಡಿದ ಪೊಲೀಸರು, ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಬೀದರ ಜಿಲ್ಲಾ ಪೊಲೀಸರ ಈ ಜನಪರ ಹಾಗೂ ವಿನೂತನ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಪೊಲೀಸ್ ವರಿಷ್ಠಾಧಿಕಾರಿಗಳ ಮನವಿ:
"ಜನಸಾಮಾನ್ಯರ ಅಮೂಲ್ಯವಾದ ಪ್ರಾಣ ರಕ್ಷಣೆ ಮಾಡಲು ಬೀದರ ಜಿಲ್ಲಾ ಪೊಲೀಸ್ ಇಲಾಖೆ ಸದಾ ಶ್ರಮಿಸುತ್ತಿದೆ. ರಸ್ತೆ ಸುರಕ್ಷತೆ ಎಂಬುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪೊಲೀಸ್ ಇಲಾಖೆಯ ಈ ಪ್ರಯತ್ನಕ್ಕೆ ಸಂಪೂರ್ಣ ಸಹಕಾರ ನೀಡಬೇಕು."
— ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ.
Yadgir, Yadgir | Aug 23, 2026