
ಯಾದಗಿರಿ ನಗರಕ್ಕೆ ರೂ. 287.70 ಕೋಟಿ ವೆಚ್ಚದಲ್ಲಿ ಸಮಗ್ರ ಒಳಚರಂಡಿ ಯೋಜನೆ:
ಭೀಮಾ ನದಿಗೆ ಕೊಳಚೆ ನೀರು ಸೇರುವುದು ತಡೆಗಟ್ಟಲು ಕ್ರಮ
=====================
ಯಾದಗಿರಿ, ಆಗಸ್ಟ್.21 (ಕ.ವಾ): ಯಾದಗಿರಿ ನಗರದ ಸಮಗ್ರ ಅಭಿವೃದ್ಧಿ, ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ರೂ. 287.70 ಕೋಟಿ ವೆಚ್ಚದಲ್ಲಿ ಸಮಗ್ರ ಒಳಚರಂಡಿ ವ್ಯವಸ್ಥೆ (Underground Drainage System) ಕಲ್ಪಿಸಲು ಪ್ರಸ್ತಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀ ರಾಹುಲ್ ತುಕಾರಾಮ ಪಾಂಡ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಈಗಾಗಲೇ ತಾಂತ್ರಿಕ ಅನುಮೋದನೆ ಪಡೆಯಲಾಗಿದ್ದು, ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಯೋಜನೆಯಡಿ 9 ಎಂಎಲ್ಡಿ ಸಾಮಥ್ರ್ಯದ ಮಲಿನ ನೀರು ಸಂಸ್ಕರಣಾ ಘಟಕ (ಎಸ್ಟಿಪಿ) ಸ್ಥಾಪಿಸಲು ಉದ್ದೇಶಿಸಲಾಗಿದೆ. ಭೀಮಾ ನದಿಯ ಸಮೀಪದಲ್ಲಿ WetWell ನಿರ್ಮಿಸಿ, ನಗರದ ವಿವಿಧ ಭಾಗಗಳಿಂದ ಹರಿಯುವ ಕೊಳಚೆ ನೀರನ್ನು ಸಂಗ್ರಹಿಸಿ, ಪಂಪ್ ಮೂಲಕ ಎಸ್ಟಿಪಿಗೆ ರವಾನಿಸಿ ವೈಜ್ಞಾನಿಕವಾಗಿ ಸಂಸ್ಕರಿಸಲು ಯೋಜಿಸಲಾಗಿದೆ.
ಈ ವ್ಯವಸ್ಥೆ ಜಾರಿಯಾದಲ್ಲಿ ಪ್ರಸ್ತುತ ತೆರೆದ ಚರಂಡಿಗಳಿಂದ ನೇರವಾಗಿ ಭೀಮಾ ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಲಿದೆ. ಮಲಿನ ನೀರನ್ನು ಎಸ್ಟಿಪಿ ಯಲ್ಲಿ ಸಂಸ್ಕರಿಸಿದ ನಂತರವೇ ನಿಯಮಾನುಸಾರ ವಿಲೇವಾರಿ ಮಾಡುವ ಮೂಲಕ ಭೀಮಾ ನದಿಯ ಜಲ ಮಾಲಿನ್ಯವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.
ಸಮಗ್ರ ಒಳಚರಂಡಿ ವ್ಯವಸ್ಥೆಯ ಅನುಷ್ಠಾನದಿಂದ ಯಾದಗಿರಿ ನಗರದ ಸ್ವಚ್ಚತೆ ಮತ್ತು ನೈರ್ಮಲ್ಯ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ಕಂಡುಬರುವುದರ ಜೊತೆಗೆ ಸಾರ್ವಜನಿಕರ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಉಂಟಾಗಲಿದೆ. ನಗರದಲ್ಲಿ ಮಲಿನ ನೀರಿನ ವೈಜ್ಞಾನಿಕ ನಿರ್ವಹಣೆ ಸಾಧ್ಯವಾಗುವುದರಿಮದ ಪರಿಸರ ಸಂರಕ್ಷಣೆಗೆ ಸಹ ಹೆಚ್ಚಿನ ಆದ್ಯತೆ ದೊರೆಯಲಿದೆ.
ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತ ತಕ್ಷಣವೇ ಯೋಜನೆ ಅನುμÁ್ಠನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಯಾದಗಿರಿಯನ್ನು ಸ್ವಚ್ಛ, ಸುಂದರ ಹಾಗೂ ಪರಿಸರ ಸ್ನೇಹಿ ನಗರವನ್ನಾಗಿ ಮಾಡಲು ಇದು ಪ್ರಮುಖ ಹೆಜ್ಜೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Yadgir, Yadgir | Aug 23, 2026