
ಮಾಡ್ನಾಳ ಬಳಿ ಭೀಕರ ರಸ್ತೆ ಅಪಘಾತ: ಬೊಲೆರೊ ಗೂಡ್ಸ್ ವಾಹನ ಡಿಕ್ಕಿಯಾಗಿ ಮೂವರು ಮೃತ್ಯು
ಶಹಾಪುರ: ಯಾದಗಿರಿ ಜಿಲ್ಲೆಯ ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾಡ್ನಾಳ ಗ್ರಾಮದ ಸಮೀಪ ಇಂದು (ಆ.23) ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, 3ರಿಂದ 5 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮಾಡ್ನಾಳ ಹಾಗೂ ಹಳ್ಳಿಸಗರ ಗ್ರಾಮದ ಕೂಲಿ ಕಾರ್ಮಿಕರು ಇಂದು ಬೆಳಗ್ಗೆ ಸುಮಾರು 6.30ಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಮಾಡ್ನಾಳ ಗ್ರಾಮಕ್ಕೆ ವಾಪಸ್ ಬರುತ್ತಿದ್ದ ವೇಳೆ, ಬೆಳಗ್ಗೆ ಸುಮಾರು 9ರಿಂದ 9.30ರ ವೇಳೆಗೆ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
KA-33 B-5139 ನೋಂದಣಿ ಸಂಖ್ಯೆಯ ಬೊಲೆರೊ ಗೂಡ್ಸ್ ವಾಹನವು ವೇಗವಾಗಿ ಚಲಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಬಳಿಕ ವಾಹನವು ಬಿದ್ದಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ ಎನ್ನಲಾಗಿದೆ.
ವಾಹನದಲ್ಲಿದ್ದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರನ್ನು:
1. ಹೊನ್ನಾನಿಂಗಮ್ಮ (15) – ವಿದ್ಯಾರ್ಥಿನಿ, ಶಹಾಪುರ
2. ಸತ್ಯಮ್ಮ (32) – ಪತಿ ಮಾಳಪ್ಪ, ಮಾಡ್ನಾಳ ಗ್ರಾಮ
3. ಸೌಭಾಗ್ಯ (30) – ಪತಿ ಶೇಖಪ್ಪ, ಮಾಡ್ನಾಳ ಗ್ರಾಮ
ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರ ಪೈಕಿ ಸತ್ಯಮ್ಮ ಅವರ 13 ವರ್ಷದ ಪುತ್ರ ಚಂದ್ರು ಅವರ ತಲೆಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಇನ್ನುಳಿದ ಗಾಯಾಳುಗಳಿಗೆ ಶಹಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕೆಲವರನ್ನು ಯಾದಗಿರಿ ಹಾಗೂ ಕಲಬುರಗಿ ನಗರಗಳ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಭೀಮರಾಯನಗುಡಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.
ಬೊಲೆರೊ ವಾಹನದ ಚಾಲಕ ಶೇಖಪ್ಪ, ಮಾಡ್ನಾಳ ಗ್ರಾಮದವರು ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದು, ಪ್ರಕರಣ ದಾಖಲಾದ ನಂತರ ಹೆಚ್ಚಿನ ಅಧಿಕೃತ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ.
#ಮಾಡ್ನಾಳ #ರಸ್ತೆಅಪಘಾತ #ಭೀಕರಅಪಘಾತ #ಶಹಾಪುರ #ಯಾದಗಿರಿ #ಭೀಮರಾಯನಗುಡಿಪೊಲೀಸ್ #ಮೂವರುಮೃತ #ಅಪಘಾತ #ಗಾಯಾಳುಗಳು #ಕಲಬುರಗಿ #YadgirNews #BreakingNews #karnatakanewstoday
Yadgir, Yadgir | Aug 23, 2026