ಯಾದಗಿರಿಯಲ್ಲಿ ಭೂ-ಒಡೆತನ ಯೋಜನೆ ಜಾರಿಗೊಳಿಸಲು ಆಗ್ರಹ: ರೈತರ ಬೆಳೆಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳ ಮನವಿ
ಯಾದಗಿರಿ, ಆ.3: ಸಮತಾ ಸೈನಿಕ ದಳ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೂರಾರು ಮಹಿಳೆಯರು ಹಾಗೂ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಭೂ-ಒಡೆತನ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಹಾಗೂ ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ಬೆಳೆಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು.
ಸಮಿತಿಯ ಮುಖಂಡರು ಮಾತನಾಡಿ, ಜಿಲ್ಲೆಯ ಅನೇಕ ದಲಿತ ಕುಟುಂಬಗಳು ಹಲವು ವರ್ಷಗಳಿಂದ ಕೃಷಿ ಭೂಮಿ ಹಾಗೂ ವಸತಿ ನಿವೇಶನವಿಲ್ಲದೆ ಸಂಕಷ್ಟದಲ್ಲಿದ್ದು, 2019–20ರಲ್ಲಿ ಭೂ-ಒಡೆತನ ಯೋಜನೆಯಡಿ ಭೂಮಿ ಹಂಚಿಕೆ ಪ್ರಕ್ರಿಯೆ ಆರಂಭವಾದರೂ, ಐದು ವರ್ಷ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು. ಭೂ ಮಾಲೀಕರು ಭೂಮಿ ನೀಡಲು ಒಪ್ಪಿಗೆ ನೀಡಿದ್ದರೂ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೊಸ ಸಮಿತಿ ರಚಿಸದ ಕಾರಣ ಯೋಜನೆ ಸ್ಥಗಿತಗೊಂಡಿದೆ ಎಂದು ದೂರಿದರು.
ಭೂ ಮಾಲೀಕರಿಗೆ ಸರ್ಕಾರ ನಿಗದಿತ ದರದಲ್ಲಿ ಪರಿಹಾರ ನೀಡಿ, ಅರ್ಹ ದಲಿತ ಕುಟುಂಬಗಳಿಗೆ ಭೂಮಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಹತ್ತಿಗೂಡೂರು, ಐಕೂರು, ಮಾಲಹಳ್ಳಿ, ನಾಯ್ಕಲ್, ಚಟ್ನಳ್ಳಿ, ಬಲಕಲ್, ಮರಮಕಲ್, ದೋರನಹಳ್ಳಿ, ಇಂಗಳಗಿ, ಬಸವಂತಪುರ, ಹೈಯ್ಯಾಳ (ಬಿ), ಇಟ್ಟಿಗಿ, ಶಿರವಾಳ, ಕೊಂಗಂಡಿ, ಯಕ್ಷಿತಿ, ಬೊಮ್ಮನಹಳ್ಳಿ, ಅನವರ್, ಕೊಳ್ಳೂರು, ತುಮಕೂರು, ಕಾಡೆಮೆಗೆರ ಸೇರಿದಂತೆ ವಿವಿಧ ಗ್ರಾಮಗಳ ಫಲಾನುಭವಿಗಳನ್ನು ಯೋಜನೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಬೆಳೆಸಾಲವನ್ನು ಮನ್ನಾ ಮಾಡಬೇಕು ಹಾಗೂ ಬರದಿಂದ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಜಿಲ್ಲೆಯ ಎಲ್ಲಾ ಅರ್ಹ ದಲಿತ ಕುಟುಂಬಗಳಿಗೆ ಮನೆಗಳ ಮಂಜೂರಾತಿ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ.
ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಸಮತಾ ಸೈನಿಕ ದಳದ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ, ಪ್ರತಿಭಟನೆ ಹಾಗೂ ಜನಪ್ರತಿನಿಧಿಗಳ ನಿವಾಸಗಳ ಎದುರು ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಹತ್ತಿಗುಡೂರ ಶರಣರಡ್ಡಿ, ಜಿಲ್ಲಾ ಗೌರವಾಧ್ಯಕ್ಷ ಶರಣಪ್ಪ ಕಡಿಮನಿ ಅನಕಸೂಗೂರು, ತಾಲೂಕು ಅಧ್ಯಕ್ಷ ಶರಣಪ್ಪ ಚಲುವಾದಿ, ತಾಲೂಕು ಮುಖಂಡ ಭೀಮರಾಯ ದೋರನಹಳ್ಳಿ ಸೇರಿದಂತೆ ಸಮತಾ ಸೈನಿಕ ದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Yadgir, Yadgir | Aug 3, 2026