ಅಪರೂಪದ ಕಾಯಿಲೆಗಳಿಗೆ ಯಶಸ್ವಿ ಚಿಕಿತ್ಸೆ ನೀಡುವಲ್ಲಿ ಸಾಕಷ್ಟು ಖ್ಯಾತಿ ಪಡೆದಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಈಗ ಮತ್ತೊಂದು ಸಾಧನೆ ಮಾಡಿದೆ. ವಿಲ್ಮ್ಸ್ ಟ್ಯೂಮರ್ ಎಂಬ ಮೂತ್ರಪಿಂಡದ ಕ್ಯಾನ್ಸರ್ಗೆ ತುತ್ತಾಗಿ, ಒಂದೇ ಒಂದು ಮೂತ್ರಪಿಂಡದಿಂದ ಜೀವನ ಸಾಗಿಸುತ್ತಿದ್ದ 9 ವರ್ಷದ ಬಾಲಕನಿಗೆ ಅಸ್ಥಿ ಮಜ್ಜೆ ಕಸಿ/ ಮೂಳೆ ಮಜ್ಜೆಯ ಕಸಿ (ಬಿಎಂಟಿ)ಯನ್ನು ಯಶಸ್ವಿಯಾಗಿ ನಿರ್ವಹಿಸಿ ಮಹತ್ವದ ಮೈಲಿಗಲ್ಲು ಸ್ಥಾಪಿಸಲಾಗಿದೆ. ಯುವರಾಜ್ ಎಂಬ ಬಾಲಕನಿಗೆ ಡಿಸೆಂಬರ್ 2022 ರಲ್ಲಿ ವಿಲ್ಮ್ಸ್ ಟ್ಯೂಮರ್ ಇರುವುದು ಪತ್ತೆಯಾಯಿತು. ಕೀಮೋಥೆರಪಿ ಚಿಕಿತ್ಸೆ ನೀಡಿ ಎಡ ಮೂತ್ರಪಿಂಡಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ತದನಂತರ ರೇಡಿಯೇಷನ್ ಚಿಕಿತ್ಸೆ ನೀಡಲಾಯಿತು. ದುರದೃಷ್ಟವಶಾತ್, ಏಪ್ರಿಲ್ 2025 ರಲ್ಲಿ ಮರುಕಳಿಸಿತು.