ಕದ್ರಾದಲ್ಲಿ ನಡೆದ ಯುವತಿ ರಿಶೇಲ ಕೀನ್ತೋದ ಡಿಸೋಜಾ ಅವರ ಆತ್ಮಹತ್ಯೆ ಪ್ರಕರಣವು ಇದೀಗ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಪ್ರಕರಣದ ಸುತ್ತ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಜ. 09 ರಂದು ಸಂಭವಿಸಿದ ಈ ಘಟನೆಗೆ ಸಂಬಂಧಿಸಿದಂತೆ ಕದ್ರಾ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ 2023 ರ ಕಲಂ 108 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ, ತನಿಖೆಯ ಗತಿಯ ಬಗ್ಗೆ ಮೃತರ ಕುಟುಂಬಸ್ಥರು ಮತ್ತು ಸಾರ್ವಜನಿಕ ವಲಯದಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿದೆ. ಮೃತಳ ತಾಯಿ ರೀನಾ ಡಿಸೋಜಾ ಅವರು ಈ ಸಾವಿನ ಹಿಂದೆ ರಾಜಕೀಯ ಪ್ರಭಾವವಿರುವ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದು, ತಮ್ಮ ಮಗಳಿಗೆ ನ್ಯಾಯ ಸಿಗಬೇಕೆಂದು ಸೋಮವಾರ ಮಧ್ಯಾಹ್ನ1ಕ್ಕೆ ನಗರದಲ್ಲಿ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.