ಮೆನ್ನಬೆಟ್ಟು ಗ್ರಾಮದಲ್ಲಿ ಬಾವಿಗೆ ಬಿದ್ದ ಚಿರತೆ ಸಾವು
ಚಿರತೆಯೊಂದು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪ ಮೆನ್ನಬೆಟ್ಟು ಗ್ರಾಮದಲ್ಲಿ ಸೋಮವಾರ ನಡೆದಿದೆ. ಕಿನ್ನಿಗೋಳಿ ಮುಕ್ಕ ರಸ್ತೆ ಸಮೀಪ ಇರೋ ಮನೆಯ ಬಾವಿಗೆ ಬಿದ್ದು ಚಿರತೆ ಸಾವನ್ನಪ್ಪಿದೆ. ಮನೆಮಂದಿ ಮುಂಜಾನೆ ಎದ್ದು ಪಂಪ್ ಅನ್ ಮಾಡುವಾಗ ನೀರು ಬರಲಿಲ್ಲ. ಹೀಗಾಗಿ ಅವರು ಬಾವಿ ಇಣುಕಿದಾಗ ಚಿರತೆ ಕಂಡು ಬಂದಿದ್ದು, ತಕ್ಷಣ ಪಂಪ್ ಬಂದ್ ಮಾಡಿದ್ದಾರೆ. ಚಿರತೆ ಪಂಪ್ ನ ನೈಲಾನ್ ಹಗ್ಗ ಮತ್ತು ಪಂಪ್ ನ ಪೈಪ್ ಹಿಡಿದು ಮೇಲಕ್ಕೆ ಬರಲು ಪ್ರಯತ್ನಿಸಿದ್ದು, ಈ ವೇಳೆ ಹಗ್ಗ ಮತ್ತು ಪೈಪ್ ತುಂಡಾಗಿದೆ. ಸ್ವಲ್ಪ ಹೊತ್ತಿನ ಬಳಿಕ ನೋಡಿದಾಗ ಚಿರತೆ ಪಂಪ್ ಗೆ ಅಳವಡಿಸಿದ್ದ ವಿದ್ಯುತ್ ವಯರ್ ಬಾಯಲ್ಲಿ ಕಚ್ಚಿ ಮೃತಪಟ್ಟಿದೆ. ಅರಣ್ಯ ಇಲಾಖಾಧಿಕಾರಿಗಳು ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.