ಕೊಡವರು ಅಂದ್ರೆ ಹಾಕಿ. ಹಾಕಿ ಅಂದ್ರೆ ಕೊಡವರು. ಚೆನ್ನಂಡ ಹಾಕಿ ಪಂದ್ಯಾವಳಿಗೆ ಸರ್ಕಾರದಿಂದ ಒಂದು ಕೋಟಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಭಾನುವಾರ ಮಧ್ಯಾಹ್ನ 1:30 ರ ಸುಮಾರಿಗೆ "ಚೆನ್ನಂಡ ಹಾಕಿ ಪಂದ್ಯಾವಳಿ"ಯ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಹಾಕಿ ಪಟುಗಳು ಮಿಂಚಿದ್ದಾರೆ. ದೇಶಕ್ಕೆ ಕೀರ್ತಿ ತಂದಿದ್ದಾರೆ. ಏಷ್ಯಾ ಗೇಮ್ಸ್ ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ಮತ್ತು ಘನತೆ ತಂದುಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.