ಜಿಲ್ಲೆಯಲ್ಲಿ ದಶಕಗಳಿಂದ ಎಂಡೋಸಲ್ಫಾನ್ ಬಾಧೆಗೆ ಒಳಗಾಗಿಯೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದ ನೂರಾರು ಕುಟುಂಬಗಳಿಗೆ ಇದೀಗ ಹೊಸ ಆಶಾಕಿರಣ ಮೂಡಿದೆ ಎಂದು ಸ್ಕೊಡ್ ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಹೇಳಿದ್ದಾರೆ. ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಬುಧವಾರ ಮಧ್ಯಾಹ್ನ 2ಕ್ಕೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್. ವೈದ್ಯರವರ ವಿಶೇಷ ಕಾಳಜಿಯಿಂದಾಗಿ, ಜಿಲ್ಲೆಯ ಆರು ತಾಲೂಕುಗಳಲ್ಲಿ ಮರು ಸಮೀಕ್ಷೆ ನಡೆಸಿ ಹೊಸದಾಗಿ 543 ಸಂತ್ರಸ್ತರನ್ನು ಗುರುತಿಸುವ ಮೂಲಕ ಅವರಿಗೆ ಮಾನವೀಯ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.