ಬೆಂಗಳೂರು ದಕ್ಷಿಣ: ಶಾಸಕ ಸತೀಶ್ ರೆಡ್ಡಿ ಮನೆ ಹಿಂಭಾಗದ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಗಾಜು ಜಖಂಗೊಳಿಸಿದ ಕಿಡಿಗೇಡಿಗಳು, ಹೊಂಗಸಂದ್ರದಲ್ಲಿ ಘಟನೆ
ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಗಾಜುಗಳನ್ನ ಕಿಡಿಗೇಡಿಗಳು ಹೊಡೆದು ಹಾಕಿರುವ ಘಟನೆ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ನಡೆದಿದೆ. ಶಾಸಕ ಸತೀಶ್ ರೆಡ್ಡಿ ಮನೆ ಹಿಂಭಾಗದ ರಸ್ತೆಯಲ್ಲಿ ಜುಲೈ 6ರಂದು ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಬಂದಿರುವ ಕಿಡಿಗೇಡಿಗಳು ಹೊಂಗಸಂದ್ರ ಗಾರ್ವೆಬಾವಿಪಾಳ್ಯ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳ ಗಾಜುಗಳನ್ನ ಪುಡಿಗಟ್ಟಿದ್ದಾರೆ. ಘಟನೆಯಲ್ಲಿ ಕಾರು, ಆಟೋಗಳು ಸೇರಿದಂತೆ 10ಕ್ಕೂ ಅಧಿಕ ವಾಹನಗಳ ಗಾಜುಗಳು ಪುಡಿ ಪುಡಿಯಾಗಿವೆ. ಘಟನಾ ಸ್ಥಳ ಪರಿಶೀಲನೆ ನಡೆಸಿದ್ದ ಬೊಮ್ಮನಹಳ್ಳಿ ಠಾಣೆ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನ ಆಧರಿಸಿ ನಾಲ್ವರನ್ನ ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.