ರಾಜ್ಯದ ಜನತೆಗೆ ಸರ್ಕಾರದ ಸೇವೆಗಳನ್ನು ವಿಳಂಬ ಮಾಡದೇ ಪೂರೈಸುವ ಜೊತೆಗೆ, ಅಧಿಕಾರಿಗಳು ಜಾತ್ಯತೀತವಾಗಿ, ಮಾನವೀಯ ನೆಲೆಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ತಿಳಿಸಿದರು. ಗುರುವಾರ ಮಧ್ಯಾಹ್ನ 3 ಗಂಟೆ ಸು.ಅರಿಗೆ ವಿಧಾನಸೌಧದಲ್ಲಿ ಹೊಸ ವರ್ಷದ ಪ್ರಯುಕ್ತ ಸರ್ಕಾರದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಶುಭಕೋರಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹೊಸ ವರ್ಷದ ಮೊದಲ ದಿನವಾದ ಇಂದು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು ನಮ್ಮ ಪದ್ಧತಿ. ಹಿಂದೂ ಪದ್ಧತಿಯಲ್ಲಿ ಯುಗಾದಿ ಹೊಸ ವರ್ಷವಾಗಿದ್ದರೂ, ಇಂಗ್ಲೀಷ್ ಕ್ಯಾಲೆಂಡರ್ ನಂತೆ ಇಂದು ಪ್ರಾರಂಭವಾಗುವ ಹೊಸ ವರ್ಷವನ್ನು ವಿಶ್ವದಾದ್ಯಂತ ಸಂಭ್ರಮಾಚರಣೆಯಿಂದ ಸ್ವಾಗತಿಸಲಾಗುತ್ತದೆ.