ಸೂಪಾ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜೋಯಿಡಾ ತಹಶೀಲ್ದಾರ್ ಕಾರ್ಯಾಲಯದ ಮುಂಭಾಗದಲ್ಲಿ 2ನೇ ದಿನಕ್ಕೆ ಮುಂದುವರಿದ ಕ. ಪ್ರಾಂತ ರೈತ ಸಂಘದ ಪ್ರತಿಭಟನೆ
ಜೋಯಿಡಾ : ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಅವಶ್ಯ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಡಿ ಜೋಯಿಡಾ ತಹಶೀಲ್ದಾರ್ ಕಾರ್ಯಾಲಯದ ಮುಂಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದು ಮಂಗಳವಾರ ಎರಡನೇ ದಿನಕ್ಕೆ ಮುಂದುವರೆದಿದೆ. ನಿನ್ನೆ ಸೋಮವಾರದಿಂದ ಅಹೋ ರಾತ್ರಿ ಧರಣಿ ಆರಂಭಗೊಂಡಿದೆ. ಸೋಮವಾರ ತಡರಾತ್ರಿ ತಹಶೀಲ್ದಾರ್ ಮಂಜುನಾಥ್ ಮುನ್ನೋಳ್ಳಿ ಮತ್ತು ಪಿಎಸ್ಐ ಮಹೇಶ್ ಮಾಳಿಯವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಪ್ರತಿಭಟನೆಯನ್ನು ಕೈಬಿಡುವಂತೆ ಒತ್ತಾಯಿಸಿದ್ದರು. ಆದರೂ ಪ್ರತಿಭಟನೆ ಇಂದು ಮಂಗಳವಾರವು ಮುಂದುವರೆದಿದೆ.