ದಾಂಡೇಲಿ: ರಜತ ಸಂಭ್ರಮದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ : ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಸ್ವತ್ತು : ಡಾ.ಬರಗೂರು
ದಾಂಡೇಲಿ : ಕನ್ನಡ ಸಾಹಿತ್ಯ ಪರಿಷತ್ತು ಯಾರ ಗುತ್ತಿಗೆಯು ಅಲ್ಲ, ಅದು ಕನ್ನಡಿಗರ ಸ್ವತ್ತು. ಸರ್ವಾಧಿಕಾರಿ ಧೋರಣೆ ಯಾವುದೇ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ಗೌರವ ತರುವಂತಹದ್ದಲ್ಲ. ಕುರ್ಚಿಯಲ್ಲಿ ಕೂತ ಮನುಷ್ಯ ಕುಬ್ಜನಾಗಬಾರದು. ಅದು ಪ್ರಜಾಪ್ರಭುತ್ವದ ಸೊಬಗಲ್ಲ. ಕುರ್ಚಿಗಿಂತ ಮನುಷ್ಯ ದೊಡ್ಡವನಾಗಿರಬೇಕು ಎಂಬುವುದೇ ಪ್ರಜಾಪ್ರಭುತ್ವದ ನಿಜವಾದ ಮೌಲ್ಯ. ಇವತ್ತು ಏನಾದರೂ ಕನ್ನಡ ಉಳಿದರೇ ಅದು ಸಾಮಾನ್ಯ ಕನ್ನಡಿಗರದಿಂದ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಸಾಮಾನ್ಯ ಕನ್ನಡಿಗರಿಗೆ ಕನ್ನಡ ಬದುಕಿನ ಭಾಷೆಯಾಗಿದೆ. ಕನ್ನಡವನ್ನು ಉಳಿಸಿ ಬೆಳೆಸಿದವರು ಸಾಮಾನ್ಯ ಕನ್ನಡಿಗರು ಎನ್ನುವುದನ್ನು ನಾವು ನೀವೆಲ್ಲರೂ ಹೃದಯದಿಂದ ಒಪ್ಪಿಕೊಳ್ಳಬೇಕು.