ಹಳಿಯಾಳ : ಪಟ್ಟಣದಲ್ಲಿರುವ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟವನ್ನು ಬಿಜೆಪಿ ಸಂಪೂರ್ಣ ಬೆಂಬಲಿಸುತ್ತದೆ ಎಂದು ಮಾಜಿ ಶಾಸಕರು ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸುನೀಲ ಹೆಗಡೆಯವರು ಹೇಳಿದರು. ಅವರು ಭಾನುವಾರ ಸಂಜೆ 5:30 ಗಂಟೆ ಸುಮಾರಿಗೆ ಹಳಿಯಾಳದಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ ಹೇಳಿದರು. ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ ಹಿಂದಿನ ಬಾಕಿ ಹಣ ಪಾವತಿಸದೇ ಇರುವುದು ಹಾಗೂ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸದಿರುವುದು ಖಂಡನೀಯವಾಗಿದೆ. ಈ ಹೋರಾಟದಲ್ಲಿ ಅ. 27ರಂದು ಸೋಮವಾರ ಬಿಜೆಪಿ ಪಕ್ಷದ ಪರವಾಗಿ ತಾನು ಹಾಗೂ ಘೋಟ್ನೇಕರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.