ಬಣ್ಣ ಕಳೆದುಕೊಳ್ಳುತ್ತಿದ್ದ ಸುಣಗಾರರ ಬದುಕಿಗೆ ಅಡಿಕೆ ಬೆಳೆಯಿಂದ ಹೊಸ ಬಣ್ಣ ಸುಣ್ಣದ ಬೇಡಿಕೆ ಕುಸಿದ ಪರಿಣಾಮ ತಾಲೂಕಿನಲ್ಲಿರುವ ಸುಣಗಾರರ ಬದುಕು ಒಂದು ಕಾಲದಲ್ಲಿ ‘ಬಣ್ಣ’ ಕಳೆದುಕೊಂಡಿತ್ತು. ಮನೆ, ಅಂಗಡಿ, ಶಾಲೆ ಸೇರಿದಂತೆ ವಿವಿಧ ಕಟ್ಟಡಗಳಿಗೆ ಸುಣ್ಣ ಬಳಿದು ಸಿಂಗರಿಸುವ ಸಂಪ್ರದಾಯ ಮಾಯವಾಗಿ ಬಣ್ಣಗಳ ಬಳಕೆ ಹೆಚ್ಚಾದಂತೆ, ಸುಣ್ಣದ ಕಸುಬು ನಿಧಾನವಾಗಿ ಹಿಂಜರಿದಿತ್ತು. ಇದರಿಂದ ಸುಣ್ಣ ಸುಡುವ ಮತ್ತು ಮಾರಾಟ ಮಾಡುವುದನ್ನೇ ನಂಬಿಕೊಂಡಿದ್ದ ಹಲವಾರು ಕುಟುಂಬಗಳು ಜೀವನೋಪಾಯಕ್ಕಾಗಿ ಬೇರೆ ವೃತ್ತಿಗಳನ್ನು ಅವಲಂಬಿಸುವ ಪರಿಸ್ಥಿತಿ ಎದುರಿಸಬೇಕಾಯಿತು.