ರಾಯಚೂರು: ಜಿಲ್ಲೆಯಲ್ಲಿ ಬೆಳೆ ಹಾನಿ ಪ್ರದೇಶಗಳಿಗೆ ಉಸ್ತುವಾರಿ ಮಂತ್ರಿಗಳಿಂದ ಸ್ಪಾಟ್ ವಿಸಿಟ್ ನಾಳೆ; ಅ.1 ಕ್ಕೆ ಸಚಿವರ ಹೈವೋಲ್ಟೇಜ್ ಮೀಟಿಂಗ್
ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಅಕ್ಟೋಬರ್ 1ರಂದು ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಕ್ಟೋಬರ್ 1ರ ಬೆಳಿಗ್ಗೆ 6.30 ಗಂಟೆಗೆ ಕಲಬುರಗಿಯಿಂದ ನಿರ್ಗಮಿಸಿ ರಸ್ತೆ ಮಾರ್ಗವಾಗಿ ಹೊರಟು ಬೆಳಿಗ್ಗೆ 9.30ಕ್ಕೆ ಲಿಂಗಸೂಗೂರು ನಗರಕ್ಕೆ ಆಗಮಿಸಿ ಲಿಂಗಸುಗೂರು, ಮಸ್ಕಿ, ಸಿಂಧನೂರು, ಮಾನ್ವಿ ಹಾಗೂ ರಾಯಚೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ 1.30ಕ್ಕೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಳೆ ಹಾನಿ ಪ್ರದೇಶಗಳಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.