ಗುಂಡ್ಲುಪೇಟೆ: ಮದ್ದೂರು ಅರಣ್ಯ ವಲಯದಲ್ಲಿ ಕಾಡಾನೆ ಸಾವು; ಹೃದಯ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶಂಕೆ
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದ ಮದ್ದೂರು ವಲಯದಲ್ಲಿ ಸುಮಾರು 30-35 ವರ್ಷದ ಹೆಣ್ಣಾನೆಯೊಂದು ಮೃತಪಟ್ಟಿದೆ, ಸ್ವಾಭಾವಿಕವಾಗಿ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ದೃಢವಾಗಿದೆ. ಮದ್ದೂರು ವಲಯದ ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಮದ್ದೂರು ಶಾಖೆಯ ಬಿದಿರುತಾಳೆ ಬಳಿ ಆನೆಯೊಂದರ ಕಳೇಬರ ಕಂಡು ಬಂದಿದೆ. ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿ, ಆನೆಯ ವಿವಿಧ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ನಂತರ ಆನೆ ಕಳೇಬರವನ್ನು ಅರಣ್ಯದಲ್ಲೆ ಬಿಡಲಾಗಿದೆ.