ಗುಂಡ್ಲುಪೇಟೆ: ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಕಾಡುಪ್ರಾಣಿ ಹಾವಳಿ ಹೆಚ್ಚಳ; ಪಟ್ಟಣದಲ್ಲಿ ಪರಿಸರವಾದಿ ಹೂವರ್ ಆಕ್ರೋಶ
ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು, ಜನ-ಜಾನುವಾರು, ಫಸಲಿನ ಮೇಲೆ ದಾಳಿ ನಡೆಸುತ್ತಿವೆ ಎಂದು ಪರಿಸರವಾದಿ ಜೋಸೆಫ್ ಹೂವರ್ ದೂರಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಅರಣ್ಯ ರಕ್ಷಣೆ ಮಾಡುವಲ್ಲಿ ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸರಿಯಾಗಿ ಕರ್ತವ್ಯ ನಿರ್ವಹಿಸದೆ ಹಿನ್ನೆಲೆ ಕಾಡು ಪ್ರಾಣಿಗಳು ನಾಡಿನತ್ತ ಲಗ್ಗೆಯಿಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ಹೆಚ್ಚುತ್ತಿದ್ದು ಹುಲಿ, ಚಿರತೆ ದಾಳಿ ಪ್ರಕರಣಗಳು ಅಧಿಕವಾಗಿದೆ. ದಾಳಿ ಹಾಗೂ ಫಸಲು ನಾಶಕ್ಕೆ ಅರಣ್ಯ ಇಲಾಖೆಯವರು ಎಷ್ಟು ಪರಿಹಾರವನ್ನು ನೀಡಿದ್ದಾರೆ ಎಂದು ಪ್ರಶ್ನಿಸಿದರು.