ಹನೂರು: ಲೊಕ್ಕನಹಳ್ಳಿಯಲ್ಲಿ ಮಳೆ ಆರ್ಭಟ – ಮನೆ ಮೇಲೆ ಮರ ಬಿದ್ದು ಪ್ರಾಣಾಪಾಯದಿಂದ ಪಾರಾದ ಕುಟುಂಬ
ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಭಾರೀ ಮಳೆಯ ಪರಿಣಾಮ ಮನೆಯೊಂದರ ಮೇಲೆ ಬೃಹತ್ ಗಾತ್ರದ ಮರ ಬಿದ್ದು, ಮನೆಯ ಹಂಚುಗಳು ಧ್ವಂಸಗೊಂಡು ಮನೆಯೊಳಗೆ ಮರದ ಕೊಂಬೆಗಳು ನುಗ್ಗಿದ ಪ್ರಸಂಗ ನಡೆದಿದೆ. ಈ ವೇಳೆ ಅದೃಷ್ಟವಶಾತ್ ಮನೆಯಲ್ಲಿದ್ದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದ ನಿವಾಸಿ ನಿಂಗಮ್ಮ ಅವರಿಗೆ ಸೇರಿದ ಮನೆಗೆ ಹತ್ತಿರದಲ್ಲಿಯೇ ನಿಂತಿದ್ದ ಮರವೊಂದು, ಮಳೆಗೆ ಬಿದ್ದು ನೇರವಾಗಿ ಮನೆಗೆ ಬಡಿದಿದೆ. ಪರಿಣಾಮವಾಗಿ ಮನೆಯ ಹಂಚುಗಳು ಮುರಿದು ಬಿದ್ದಿದ್ದು, ಮರದ ಕೊಂಬೆಗಳು ಮನೆಯೊಳಗೆ ನುಗ್ಗಿವೆ. ಈ ಘಟನೆಯ ಸಮಯದಲ್ಲಿ ಮನೆ ವಾಸಿಗಳು ತಕ್ಷಣ ಸ್ಪಂದನೆ ನೀಡಿ ಹೊರಬಂದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.