ಗುಂಡ್ಲುಪೇಟೆ: ದೇಶಿಪುರ ಕಾಲೋನಿ, ಅಗತಗೌಡನಹಳ್ಳಿಯಲ್ಲಿ ಹುಲಿ ದಾಳಿಗೆ ಹಸುಗಳು ಬಲಿ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ದಾಳಿ ಪ್ರಕರಣ ಮುಂದುವರೆದಿದ್ದು ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಕಾಲೋನಿ ಮತ್ತು ಅಗತಗೌಡನಹಳ್ಳಿ ಗ್ರಾಮದಲ್ಲಿ ಹುಲಿ ದಾಳಿಗೆ ಎರಡು ಹಸುಗಳು ಮೃತಪಟ್ಟ ಪ್ರತ್ಯೇಕ ಘಟನೆ ಸೋಮವಾರ ನಡೆದಿದೆ. ದೇಶಿಪುರ ಕಾಲೋನಿಯ ಚೆನ್ನಮ್ಕ ಎಂಬವರಿಗೆ ಸೇರಿದ ಹಸು ಹಾಗೂ ಅಗತಗೌಡನಹಳ್ಳಿಯಲ್ಲಿ ರವಿ ಎಂಬುವರಿಗೆ ಸೇರಿದ ಹಸು ಹುಲಿ ದಾಳಿಗೆ ಬಲಿಯಾಗಿದೆ. ಹುಲಿ ದಾಳಿ ಪ್ರಕರಣಗಳು ಮರುಕಳಿಸುತ್ತಲೇ ಇದ್ದು ರೈತರು ಜಮೀನಿಗೆ ತೆರಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದ್ದು ಅರಣ್ಯ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.