ರಾಯಚೂರು: ನಗರದಲ್ಲಿ ನವರಾತ್ರಿ ಹಬ್ಬದ ಖರೀದಿ ಜೋರು; ಬಾಳೆದಿಂಡು ಹೂಗಳ ದರ ದುಪ್ಪಟ್ಟು: ಖರೀದಿ ಅನಿವಾರ್ಯ ಎಂದ ಗ್ರಾಹಕರು
ಜಿಲ್ಲೆಯಲ್ಲಿ ನವರಾತ್ರಿ ಹಬ್ಬದ ಸಡಗರ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಬುಧವಾರ ದಸರಾ ಹಬ್ಬ ಹಿನ್ನೆಲೆಯಲ್ಲಿ ರಾಯಚೂರು ನಗರದ ಭಂಗಿಕುಂಟ ರಸ್ತೆಯ ಮಾರುಕಟ್ಟೆಯಲ್ಲಿ ಖಂಡೆ ಪೂಜೆ ಅಂಗವಾಗಿ ಜನರು ಬಾಳೆ ದಿಂಡು, ಚೆಂಡು ಹೂವಿನ ಗಿಡ, ಮಾವಿನ ತೋರಣ, ಕುಂಬಳಕಾಯಿ, ಹಣ್ಣು ಹಂಪಲುಗಳನ್ನು ಮುಗಿಬಿದ್ದು ಖರೀದಿಸಿದರು. ಬಾಳೆದಿಂಡು, ಚೆಂಡು ಹೂವಿನ ಗಿಡ, ಸಂಪಿಗೆ, ಮಲ್ಲಿಗೆ, ಚೆಂಡು ಹೂ ಹಾಗೂ ಕುಂಬಳಕಾಯಿ ದರ ಗ್ರಾಹಕರ ಕೈ ಸುಡುವಂತಿತ್ತು. ದರ ಲೆಕ್ಕಿಸದೆ ಗ್ರಾಹಕರು ಮುಗಿಬಿದ್ದು ಖರೀದಿಸುವುದು ಕಂಡು ಬಂದಿತು. ದಸರಾ ಹಬ್ಬದಂದು ಮನೆಗಳಲ್ಲಿ ದೇವರಿಗೆ, ವಾಹನಗಳಿಗೆ ಪೂಜೆ ಮಾಡಲೇಬೇಕು ಹೀಗಾಗಿ ದರ ದುಪ್ಪಟ್ಟಾದರೂ ಖರೀದಿ ಅನಿವಾರ್ಯ ಎಂದು ಗ್ರಾಹಕರು ತಿಳಿಸಿದರು.