ಮಾನವ ಪ್ರಾಣಿ ಸಂಘರ್ಷವಾಗಿ ಮನುಷ್ಯ ಸತ್ತರೆ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು. ಪ್ರಾಣಿಗಳು ಅಸಹಜವಾಗಿ ಮೃತಪಟ್ಟರೆ ಅರಣ್ಯ ಸಚಿವರೇ ರಾಜೀನಾಮೆ ನೀಡಬೇಕು ಎಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಅರಣ್ಯ ಸಚಿವ ಈಶ್ವರ ಖಂಡ್ರೆ ಮುಂದೆ ಒತ್ತಾಯಿಸಿದರು. ಮೇಲುಕಾಮನಹಳ್ಳಿ ಬಳಿ ಇರುವ ಬಂಡೀಪುರ ಸಫಾರಿ ಕೇಂದ್ರದ ಪ್ರಾಂಗಣದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ನಡೆದ ರೈತರ ಜೊತೆಗಿನ ಸಭೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಸೋಮವಾರ ಮಾತನಾಡಿ, ಪ್ರಾಣಿಗಳ ಹಾವಳಿ ತಡೆಯಲು ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಬೇಕು. ಮಲೆ ಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಣೆ ಮಾಡಬಾರದು ಎಂದರು.