ಮಂಗಳೂರು: ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ: ನಗರದಲ್ಲಿ ವಿಶೇಷ ಭದ್ರತಾ ಪಡೆ ಆಗಮನ
ಪ್ರಧಾನಿ ನರೇಂದ್ರ ಮೋದಿ ಎ.14ರಂದು ನಗರದಲ್ಲಿ ರೋಡ್ ಶೋ ನಡೆಸಲಿರುವುದರಿಂದ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ)ಯ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದಾರೆ. ಗುರುವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಿಂದ ಡ್ರಾನಿಯರ್ಸ್ ಜೆಟ್ ಮೂಲಕ ನಗರ ಪ್ರದರ್ಶನ ನಡೆಸಿದ ಎಸ್‌ಪಿಜಿ ತಂಡವು ನಗರದ ಹಾಗೂ ಮೋದಿ ರೋಡ್ ಶೋ ಪ್ರದೇಶದ ಏರಿಯಲ್ ವೀವ್ ಮೂಲಕ ಪರಿಶೀಲನೆ ನಡೆಸಿದೆ.ನಗರದ (ಲೇಡಿಹಿಲ್) ನಾರಾಯಣ ಗುರು ವೃತ್ತದಿಂದ ಲಾಲ್‌ಬಾಗ್, ಪಿವಿಎಸ್-ನವಭಾರತ್ ಸರ್ಕಲ್ ಮೂಲಕ ಕೆಎಸ್ ರಾವ್ ರಸ್ತೆಯಲ್ಲಿ ಎಸ್‌ಪಿಜಿ ಹಾಗೂ ಆಂತರಿಕ ಭದ್ರತಾ ವಿಭಾಗದ ಗುಪ್ತಚರ ಪಡೆಯ ಅಧಿಕಾರಿಗಳು ಸಂಚಾರ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಗರ ಪೊಲೀಸ್ ಅಧಿಕಾರಿಗಳು ಜೊತೆಗೂಡಿದ್ದರು.