ಗುಂಡ್ಲುಪೇಟೆ: ಹಂಗಳ ಸಮೀಪ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಕಂಬ ಹಾಗೂ ಕಾರು ಜಖಂ
ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಸಮೀಪ ನಡೆದಿದೆ. ತಮಿಳುನಾಡು ಮೂಲದ ಸುಮೇಶ್ ಎಂಬಾತ ಪಾರಾದ ಚಾಲಕ. ಊಟಿ ಕಡೆಯಿಂದ ಮೈಸೂರಿನತ್ತ ಬರುತ್ತಿದ್ದ ಈತ ಹಂಗಳ ಸಮೀಪ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ವಿದ್ಯುತ್ ಕಂಬ ಹಾಗೂ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಸ್ಥಳಕ್ಕೆ ಬಂದ ಸೆಸ್ಕ್ ಸಿಬ್ಬಂದಿ ವಿದ್ಯುತ್ ಕಂಬ ಮುರಿದಿದ್ದಕ್ಕೆ 19,500 ದಂಡ ಕಟ್ಟಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.