ಚಾಮರಾಜನಗರ: ದಿಂಬಂ ಘಟ್ಟದ 4 ತಿರುವುಗಳಲ್ಲಿ ಮಣ್ಣು ಕುಸಿತ: ಎರಡು ರಾಜ್ಯಗಳ ನಡುವಿನ ಸಂಚಾರ ಅಸ್ತವ್ಯಸ್ತ
ತಡರಾತ್ರಿ ಸುರಿದ ಜೋರುಮಳೆಯಿಂದಾಗಿ ದಿಂಬಂ ಘಟ್ಟಪ್ರದೇಶದಲ್ಲಿ ಅಲ್ಪ ಪ್ರಮಾಣದ ಭೂ ಕುಸಿತವಾಗಿದ್ದು ಕರ್ನಾಟಕ- ತಮಿಳುನಾಡು ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ಸಮೀಪದ ದಿಂಬಂ ಘಟ್ಟವು ಎರಡು ರಾಜ್ಯಗಳ ಸಂಪರ್ಕ ಬೆಸೆಯಲಿದ್ದು ಒಟ್ಟು 27 ತೀವ್ರ ತಿರುವುಗಳಿವೆ. ಇದರಲ್ಲಿ 27, 20 ಹಾಗೂ 7, 8 ನೇ ತಿರುವಿನಲ್ಲಿ ರಸ್ತೆಗೆ ಮಣ್ಣು ರಾಚಿದ್ದು ಸಂಚಾರ ದುಸ್ತರವಾಗಿದೆ. ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ವಾಹನಗಳು ಬಣ್ಣಾರಿ ಬಳಿ ಹಾಗೂ ಕರ್ನಾಟಕದಿಂದ ತಮಿಳುನಾಡಿಗೆ ತೆರಳುವ ವಾಹನಗಳು ಆಸನೂರು ಬಳಿ ಸ್ಥಗಿತಗೊಳಿಸಿದ್ದು 3-4 ತಾಸು ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.