ಕಾರವಾರ: ಹಬ್ಬುವಾಡಾ ರಸ್ತೆ ದುರಸ್ತಿಗೆ ಆಗ್ರಹಿಸಿ ರಿಕ್ಷಾ ಚಾಲಕರಿಂದ ಪ್ರತಿಭಟನೆ
ನಗರದ ಹಬ್ಬುವಾಡಾ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಶೀಘ್ರವೇ ರಸ್ತೆ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಹಾಗೂ ರಿಕ್ಷಾ ಚಾಲಕರು ಶನಿವಾರ ಮಧ್ಯಾಹ್ನ 1ರವರೆಗೆ ಪ್ರತಿಭಟನೆ ನಡೆಸಿದರು. ನಗರದ ಹರಿದೇವನಗರದಿಂದ, ನಗರಸಭೆ ಕಚೇರಿವರೆಗೆ ಪ್ರತಿಭಟನಾಕಾರರು ಮೆರವಣಿಗೆ ಮಾಡಿ ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಹಬ್ಬುವಾಡಾ ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯ ಮಾಡಿದರು. ಬಳಿಕ ನಗರಸಭೆ ಕಚೇರಿ ಬಳಿ ಸೇರಿದ ಪ್ರತಿಭಟನಾ ಕಾರರರು ಪೌರಾಯುಕ್ತ ಜಗದೀಶ ಹುಲಿಗೆಜ್ಜೆ ಹಾಗೂ ಅಧ್ಯಕ್ಷ ರವಿರಾಜ್ ಅಂಕೋಲೇಕರ್ ಜೊತೆ ಚರ್ಚೆ ನಡೆಸಿದರು.