ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಕಲ್ಪಿಸುವಂತೆ ಆಗ್ರಹಿಸಿ ನಗರದಲ್ಲಿ ಯುವ ಜನತಾದಳದಿಂದ ಪ್ರತಿಭಟನೆ
ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ವಿದ್ಯಾರ್ಥಿ ವೇತನವನ್ನು ನೀಡದ ರಾಜ್ಯ ಸರ್ಕಾರದ ವಿರುದ್ಧ ಶಿವಮೊಗ್ಗ ನಗರದ ಯುವ ಜನತಾದಳದ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಲಾಯಿತು. ಗ್ರಾಮೀಣ ಭಾಗದಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಶಿವಮೊಗ್ಗ ನಗರಕ್ಕೆ ಬರುತ್ತಾರೆ. ವಿದ್ಯಾರ್ಥಿಗಳಿಗೆ ಸರ್ಕಾರ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ನಿರ್ಲಕ್ಷ ತೋರಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಲ್ಲದೇ ಕೂಡಲೇ ರಾಜ್ಯ ಸರ್ಕಾರ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಪ್ರತಿಭಟನೆಕಾರರು ಸಲ್ಲಿಸಿದ್ದಾರೆ.