ಕಲಬುರಗಿ: ಚಿತ್ತಾಪುರನಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ತಹಶೀಲ್ದಾರರಿಂದ ಬ್ರೇಕ್: ಕಾನೂನು ಸುವ್ಯವಸ್ಥೆ ಕಾರಣ ನೀಡಿ ಅನುಮತಿ ನಿರಾಕರಣೆ
ಚಿತ್ತಾಪುರ ಪಟ್ಟಣದಲ್ಲಿ ಇಂದು.. ಭಾನುವಾರ ಮಧ್ಯಾನ 3 ರಿಂದ 6-30 ರ ವರೆಗೆ ನಡೆಯಬೇಕಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿದೆ. ಚಿತ್ತಾಪುರ ತಹಶೀಲ್ದಾರ ನಾಗಯ್ಯ ಹಿರೇಮಠ ಅವರು ಅನುಮತಿ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ. ಪಥಸಂಚಲನಕ್ಕೆ ಅನುಮತಿ ಕೋರಿ ಆರ್ಎಸ್ಎಸ್ನ ಜಿಲ್ಲಾ ವ್ಯವಸ್ಥಾಪಕ ಪ್ರಹ್ಲಾದ ವಿಶ್ವಕರ್ಮ ಅರ್ಜಿ ಸಲ್ಲಿಸಿದ್ದರು. ಆದರೆ ಪಥ ಸಂಚಲನ ನಡೆಯಬೇಕಿದ್ದ ಭಾನುವಾರ ದಿನವೇ ಭೀಮ ಆರ್ಮಿ ಮತ್ತು ದಲಿತ ಪ್ಯಾಂಥರ್ ಸಂಘಟನೆಯವರು ಕೂಡಾ ಪಥಸಂಚಲನ ನಡೆಸಲು ಅನುಮತಿ ಕೋರಿದ್ದಾರೆ. ಹೀಗಾಗಿ ಏಕಕಾಲಕ್ಕೆ ಎಲ್ಲರಿಗೂ ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂಬ ಕಾರಣಕ್ಕೆ ನೀಡಿ ಅನುಮತಿ ನಿರಾಕರಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.