ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ ಎನ್ ರಮೇಶ್ ರವರು ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಜಯನಗರ ವಲಯ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್ ಹಾಗೂ ಸ್ಥಳೀಯ ನಿವಾಸಿಗಳ ಸಂಘ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ನಿವಾಸಿಗಳ ಪ್ರಮುಖ ಕುಂದುಕೊರತೆಗಳ ಕುರಿತು ಚರ್ಚಿಸಲು ಸಭೆಗೆ ಆಹ್ವಾನಿಸಿದ್ದರು. ಸಭೆಯಲ್ಲಿ ಸ್ಥಳೀಯ ನಿವಾಸಿಗಳ ಸಂಘದ ಪದಾಧಿಕಾರಿಗಳು ಪಾದಚಾರಿ ಮಾರ್ಗ ಒತ್ತುವರಿ, ಬೀದಿ ದೀಪ ಸಮಸ್ಯೆ, ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ, ರಸ್ತೆ ಸಮಸ್ಯೆ, ಕಾನೂನಿಗೆ ವ್ಯತಿರಿಕ್ತವಾದ ಕಟ್ಟಡಗಳ ನಿರ್ಮಾಣ, ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳು, ಸಾರ್ವಜನಿಕ ಶೌಚಾಲಯ ನಿರ್ವಹಣೆ, ಇ-ಖಾತಾ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಹೇಳಿಕೊಂಡರು.