ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾಮದ ಗ್ರಾಮ ದೇವತೆ ಮಾರಮ್ಮ ದೇವಿ ಜಾತ್ರೆ ಐದು ವರ್ಷಕ್ಕೊಮ್ಮೆ ಭಕ್ತಿಭಾವದಿಂದ ನಡೆಯುತ್ತಿದ್ದು, ಈ ಬಾರಿ ಜಾತ್ರೆಗೆ ಗ್ರಾಮಸ್ಥರು ವಿಶಿಷ್ಟ ಸಂಪ್ರದಾಯದೊಂದಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ದೇವಸ್ಥಾನದಲ್ಲಿ ಗ್ರಾಮಸ್ಥರೆಲ್ಲರು ಸೇರಿ ದೇವಿಗೆ ಸಾರು ಹಾಕುವ ಮೂಲಕ ಜಾತ್ರೆಯ ಪೂರ್ವ ಆಚರಣೆ ನಡೆಸಲಾಯಿತು. ಈ ವೇಳೆ ಸಾರು ಹಾಕಿದ ನಂತರ ಗ್ರಾಮಕ್ಕೆ ಯಾವುದೇ ಹೊಸಬರು ಹಾಗೂ ವಾಹನಗಳು ಪ್ರವೇಶ ಮಾಡದಂತೆ ಊರ ಪ್ರವೇಶದ ಎಲ್ಲಾ ರಸ್ತೆಗಳಲ್ಲೂ ಬೇಲಿ ಹಾಕಿ ಕಾವಲು ಕಾಯಲಾಗುತ್ತಿದೆ. ಮಂಗಳವಾರ ದೇವಿಗೆ ವಿಶೇಷ ಪೂಜೆ ನೆರವೇರಿದ ಬಳಿಕ ಊರ ಸುತ್ತ ಸರಗು ಹಾಕುವ ಮೂಲಕ ಜಾತ್ರೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ.