ಶಿರಸಿ: ದೇವಿಮನೆ ಘಟ್ಟದ ದೇವಸ್ಥಾನದ ಬಳಿ ಭೂ ಕುಸಿತ, ಶಿರಸಿ-ಕುಮಟಾ ಸಂಪರ್ಕ ಕಡಿತ
ಶಿರಸಿ-ಕುಮಟಾ ಹೆದ್ದಾರಿಯ ದೇವಿಮನೆ ಘಟ್ಟದ ದೇವಸ್ಥಾನದ ಬಳಿ ಶನಿವಾರ ಸಂಜೆ 5ರ ಸುಮಾರು ಭೂ ಕುಸಿತ ಉಂಟಾಗಿದೆ ಎಂದು ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ನಿರಂತರವಾಗಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಭೂ ಕುಸಿತವಾಗಿದೆ. ದೇವಿಮನೆಯ ಕ್ಷೇತ್ರ ಪಾಲೇಶ್ವರ ದೇವಸ್ಥಾನಕ್ಕೆ ಇಳಿಯುವ ಮೆಟ್ಟಿಲುಗಳಿಗೆ ಸಮೀಪದಲ್ಲಿ ಭೂ ಕುಸಿತ ಉಂಟಾಗಿದೆ. ದೇವಸ್ಥಾನದ ಮೆಟ್ಟಿಲುಗಳಿಂದ ಸುಮಾರು 20-25 ಅಡಿಗಳಷ್ಟು ದೂರದಲ್ಲಿ ಭೂ ಕುಸಿತ ಉಂಟಾಗಿದ್ದು, ದೇವಸ್ಥಾನದ ಮುಂದುಗಡೆಯೇ ಕುಸಿತ ಆಗಿದೆ. ರಸ್ತೆ ಬದಿಯ ಅಪಾರ ಪ್ರಮಾಣದ ಗುಡ್ಡ ಕುಸಿದು ಕಲ್ಲು-ಮಣ್ಣುಗಳು ಘಟ್ಟದ ಕೆಳಕ್ಕೆ ಕಂದಕಕ್ಕೆ ಜಾರಿದೆ.