ತೋಟದಲ್ಲಿ ತೆಂಗಿನಕಾಯಿ ಕಳವಾಗುತ್ತಿತ್ತು. ಈ ಹಿನ್ನಲೆ, ಕ್ಯಾಮರಾ ಅಳವಡಿಸಿದ್ದೆ, ಆ ಸಿಸಿಟಿವಿಯಲ್ಲೇ 5 ಹುಲಿಗಳು ಓಡಾಡಿರುವುದು ಸೆರೆಯಾಗಿದೆ ಎಂದು ರೈತ ಕುಮಾರಸ್ವಾಮಿ ಹೇಳಿದರು. ನಂಜೇದೇವನಪುರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಮೊದಮೊದಲು ಚಿರತೆ ಎನ್ನುತ್ತಿದ್ದರು. ಹುಲಿ ಎಂದು ಸಾಬೀತು ಪಡಿಸಲು ನಮಗೂ ಯಾವುದೇ ಪುರಾವೆ ಇರಲಿಲ್ಲ, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾದ ಬಳಿಕ ಒಂದಲ್ಲ ಐದು ಹುಲಿಗಳು ಜಮೀನಿನ ಸುತ್ತಮುತ್ತಲಿದೆ ಎಂದು ಗೊತ್ತಾಯಿತು ಎಂದರು. ರೈತರು ಮೂರ್ನಾಲ್ಕು ಮಂದಿ ಸೇರಿ ತಮ್ಮ ಜಮೀನುಗಳಲ್ಲಿ ಕ್ಯಾಮರಾ ಅಳವಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.