ಹುಬ್ಬಳ್ಳಿ: ತಾಲೂಕಿನ ಕುಸುಗಲ್ಲ ಗ್ರಾಮದ ಇಂಗಳಹಳ್ಳಿ ಕ್ರಾಸ್ ಹತ್ತಿರ ಬುಧವಾರ ಸಂಜೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಿಕ್ಷುಕನಿಗೆ ಬೈಕ್ ಹೊಡೆದಾಗ ಗಂಭೀರ ಗಾಯಗೊಂಡ ಸವಾರ ಮೃತಪಟ್ಟಿದ್ದಾರೆ. ಹೆಬಸೂರ ಗ್ರಾಮದ ರೈತ ಹನಮಂತಪ್ಪ ದೇವಪ್ಪ ಬೊಮ್ಮಣ್ಣವರ (38) ಮೃತಪಟ್ಟಿದ್ದಾರೆ. ಇವರು ಹೆಬಸೂರ ಕಡೆಯಿಂದ ಕುಸುಗಲ್ಲ ಕಡೆ ಹೊರಟಿದ್ದಾಗ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಅನಾಮಧೇಯ ಬಿಕ್ಷುಕನಿಗೆ ಡಿಕ್ಕಿ ಹೊಡೆದಾಗ ಇಬ್ಬರು ಗಾಯಗೊಂಡಿದ್ದಾರೆ. ಆಗ ಬಲವಾದ ಹೊಡೆತ ಬಿದ್ದು ಸವಾರ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.