ಜೋಯಿಡಾ : ಪ್ರವಾಸಿಗರ ಸ್ವರ್ಗ ಎಂದೇ ಕರೆಯಬಹುದಾದ ಜೋಯಿಡಾ ತಾಲೂಕಿನ ಗಣೇಶಗುಡಿಯ ಇಳವಾದಲ್ಲಿ ನಡೆಯುವ ಜಲ ಸಾಹಸ ಚಟುವಟಿಕೆಯಲ್ಲಿ ಭಾಗವಹಿಸಲೆಂದು ರಾಜ್ಯ- ಹೊರ ರಾಜ್ಯ, ದೇಶ -ವಿದೇಶಗಳಿಂದಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಪ್ರವಾಹದ ರೀತಿಯಲ್ಲಿ ಪ್ರವಾಸಿಗರು ಹರಿದು ಬರುತ್ತಿರುವುದು ವಾಡಿಕೆಯಾಗಿದೆ. ಅದರಲ್ಲೂ ವಾರಾಂತ್ಯದ ಸಮಯದಲ್ಲಿ ಲೆಕ್ಕಕ್ಕೆ ಸಿಗಲಾರದಷ್ಟು ಪ್ರವಾಸಿಗರು ಗಣೇಶಗುಡಿಯ ಇಳವಾಕ್ಕೆ ಜಲ ಸಾಹಸ ಚಟುವಟಿಕೆಗಾಗಿಯೇ ಬರುತ್ತಿದ್ದಾರೆ. ಇಂದು ಶನಿವಾರ ಬೆಳಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಗಣೇಶಗುಡಿಯ ಇಳವಾ ರಸ್ತೆಯಲ್ಲಿ ವಾಹನಗಳ ದಟ್ಟಣೆ ಬಹಳಷ್ಟಿದ್ದು, ಸುಗಮ ವಾಹನ ಸಂಚಾರ ಸಾಧ್ಯವಾಗದೇ, ನಡು ರಸ್ತೆಯಲ್ಲಿ ವಾಹನಗಳು ನಿಂತಲ್ಲೇ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿತ್ತು.