ಶಿರಸಿ: ಸಾಲ್ಕಣಿಗೆ ತೆರಳಲು ರಾತ್ರಿಯಾದರೂ ಬಾರದ ಬಸ್, ಶಿರಸಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸಾಂಕೇತಿಕ ಪ್ರತಿಭಟನೆ
ಶಿರಸಿ : ಸಾಲ್ಕಣಿ ಭಾಗಕ್ಕೆ ತೆರಳಲು ರಾತ್ರಿಯಾದರೂ ಬಸ್ಸಿಲ್ಲದೇ ಪ್ರಯಾಣಿಕರು ಪರದಾಡಿದ ಘಟನೆ ಸೋಮವಾರ ನಡೆದಿದೆ. ಬಳಿಕ ಬಸ್ಸಿಗಾಗಿ ಕೆಲ ಕಾಲ ಯುವತಿಯರೂ ಸೇರಿ ಹತ್ತಾರು ಜನರು ಪ್ರತಿಭಟನೆಯನ್ನೂ ಸಹ ನಡೆಸಿದರು. ಶಿರಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಶಿರಸಿಯಿಂದ ಸಾಲ್ಕಣಿಗೆ ಹೋಗಲು ಸುಮಾರು ಎರಡು ಗಂಟೆಯಿಂದ ಪ್ರಯಾಣಿಕರು ಬಸ್ಸಿಗಾಗಿ ಕಾದಿದ್ದಾರೆ. ಆದರೂ ಬಸ್ಸು ಬಾರದ ಕಾರಣ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಸ್ಸಿನ ವ್ಯವಸ್ಥೆಗೆ ಸೂಚನೆ ನೀಡಿದ್ದಾರೆ. ಪ್ರಯಾಣಿಕರು ಪ್ರತಿ ದಿವಸ ಇದೇ ಗೋಳಾಗಿದ್ದು, ವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.