ಮೊಳಕಾಲ್ಮೂರು: ತಾಲೂಕಿನಲ್ಲಿ ಅತೀ ದೊಡ್ಡ ಜಾತ್ರೆ ಎಂದು ಪ್ರಸಿದ್ಧಿ ಪಡೆದು ಅಪಾರ ಭಕ್ತ ಸಮೂಹವನ್ನು ಹೊಂದಿರುವ ರಾಯಾಪುರ ಪದಿನಾಮ್ ದೇವರಹಟ್ಟಿ(ಮ್ಯಾಸರಹಟ್ಟಿ)ಕೋಟೆ ಗುಡ್ಡದ ಮಾರೇಶ್ವರಿ ಸಿಡಿ ಮಹೋತ್ಸವವು ಗುರುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಸಿಡಿ ಉತ್ಸವಕ್ಕೆ ಸಾಕ್ಷಿಯಾದರು. ತಾಲೂಕಿನ ಯರೇನಹಳ್ಳಿ 'ಕರ್ನಾಲಿ' ವಂಶಸ್ಥರು ಗಂಗಾ ಪೂಜೆಯ ಸಾಮಾಗ್ರಿಗಳನ್ನು ರಾಯಾಪುರದ ಮ್ಯಾಸರಹಟ್ಟಿಗೆ ತಂದ ಆನಂತರವೇ ಚಾಲನೆಗೊಂಡಿದ್ದ ಜಾತ್ರಾ ಮಹೋತ್ಸವದಲ್ಲಿ ನಾನಾ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಾಯಿತು.